ನವದೆಹಲಿ: ರಾಷ್ಟ್ರ ರಾಜಧಾನಿಯ ಕೆಂಪು ಕೋಟೆ ಬಳಿ ನಡೆದ ರಕ್ತಸಿಕ್ತ ಕಾರು ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಕಾರ್ಯಾಚರಣೆ ನಡೆಸಿದೆ. ಸ್ಫೋಟದ ಪ್ರಮುಖ ಸಂಚುಕೋರನಿಗೆ ತಲೆಮರೆಸಿಕೊಳ್ಳಲು ಜಾಗ ನೀಡಿದ್ದ ಏಳನೇ ಆರೋಪಿಯನ್ನು ಎನ್‌ಐಎ ಅಧಿಕಾರಿಗಳು ಇದೀಗ ಹೆಡೆಮುರಿ ಕಟ್ಟಿದ್ದಾರೆ.
ಬಂಧಿತ ಆರೋಪಿಯನ್ನು ಫರಿದಾಬಾದ್ ನಿವಾಸಿ ಸೋಯಾಬ್ ಎಂದು ಗುರುತಿಸಲಾಗಿದೆ. ಈತನಿಗೂ ಮತ್ತು ಸ್ಫೋಟದ ಪ್ರಮುಖ ರೂವಾರಿ ‘ಟೆರರ್ ಡಾಕ್ಟರ್’ ಎಂದೇ ಕುಖ್ಯಾತಿ ಪಡೆದಿರುವ ಉಮರ್ ಉನ್ ನಬಿಗೂ ನಿಕಟ ಸಂಪರ್ಕವಿರುವುದು ತನಿಖೆಯಲ್ಲಿ ದೃಢಪಟ್ಟಿದೆ.
ದೆಹಲಿಯಲ್ಲಿ ಅಮಾಯಕರ ರಕ್ತ ಹರಿಯುವ ಮುನ್ನ, ಅಂದರೆ ಕಾರು ಸ್ಫೋಟಕ್ಕೂ ಮೊದಲು ಉಗ್ರ ಉಮರ್‌ಗೆ ಈ ಸೋಯಾಬ್ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದ ಎಂಬ ಆಘಾತಕಾರಿ ಮಾಹಿತಿ ವಿಚಾರಣೆ ವೇಳೆ ಹೊರಬಿದ್ದಿದೆ.
ಆ ಕರಾಳ ದಿನ ನಡೆದಿದ್ದೇನು?: ನವೆಂಬರ್ 10ರ ಸಂಜೆ 6:52ರ ಸುಮಾರಿಗೆ ಕೆಂಪು ಕೋಟೆಯ ಬಳಿ ಭಾರಿ ಶಬ್ದದೊಂದಿಗೆ ಕಾರು ಸ್ಫೋಟಗೊಂಡಿತ್ತು. ಕ್ಷಣಾರ್ಧದಲ್ಲೇ ಅಲ್ಲಿನ ಚಿತ್ರಣವೇ ಬದಲಾಗಿ, 15 ಜನರ ಪ್ರಾಣಪಕ್ಷಿ ಹಾರಿಹೋಗಿತ್ತು ಮತ್ತು 20ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು.
ಘಟನೆಗೆ ಪ್ರತಿಕಾರವಾಗಿ ಮತ್ತು ಕಠಿಣ ಸಂದೇಶ ರವಾನಿಸಲು ಭದ್ರತಾ ಪಡೆಗಳು ಈಗಾಗಲೇ ಮುಖ್ಯ ಆರೋಪಿ ಡಾ. ಉಮರ್‌ನ ಮನೆಯನ್ನು ಬುಲ್ಡೋಜರ್ ಮೂಲಕ ನೆಲಸಮ ಮಾಡಿವೆ. ಪ್ರಕರಣದ ಜಾಡು ಹಿಡಿದಿರುವ ಎನ್‌ಐಎ ಅಧಿಕಾರಿಗಳು, ಇದುವರೆಗೆ ಒಟ್ಟು 6 ಆರೋಪಿಗಳನ್ನು ಬಂಧಿಸಿದ್ದರು.
ಇದೀಗ ಸೋಯಾಬ್ ಬಂಧನದೊಂದಿಗೆ ಒಟ್ಟು ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದ್ದು, ಉಗ್ರರ ಜಾಲವನ್ನು ಬೇರುಸಮೇತ ಕಿತ್ತುಹಾಕಲು ತನಿಖೆ ಚುರುಕುಗೊಳಿಸಲಾಗಿದೆ.
