Home ನಮ್ಮ ಜಿಲ್ಲೆ ದಾವಣಗೆರೆ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲಿದ್ದಾರೆ ರೇಣುಕಾಚಾರ್ಯ

ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕಲಿದ್ದಾರೆ ರೇಣುಕಾಚಾರ್ಯ

0

ದಾವಣಗೆರೆ: “ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು” ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಭದ್ರಾ ಬಲದಂಡೆ ನಾಲೆ ಸೀಳಿ ನಡೆಸುತ್ತಿರುವ ಕಾಮಗಾರಿ ವಿರೋಧಿಸಿ ಜಿಲ್ಲಾ ರೈತ ಒಕ್ಕೂಟ ನೇತೃತ್ವದಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

“ನಮ್ಮ ಹೋರಾಟ ಯಾವುದೇ ಸ್ವಾರ್ಥಕ್ಕಾಗಿ ಅಲ್ಲ. ಭದ್ರಾ ಬಲದಂಡೆ ಅಚ್ಚುಕಟ್ಟು ಪ್ರದೇಶದ ರೈತರಿಗಾಗಿ ಹೋರಾಟ. ಜುಲೈ 14ರಂದು ಬೆಳಗ್ಗೆ 10.30ಕ್ಕೆ ಸಿಎಂ, ಡಿಸಿಎಂ ಮನೆಗೆ ಮುತ್ತಿಗೆ ಹಾಕುತ್ತೇವೆ” ಎಂದು ಹೇಳಿದರು.

“ರಾಜ್ಯದ ಕಾಂಗ್ರೆಸ್ ಸರ್ಕಾರ ಭದ್ರಾ ಬಲದಂಡೆ ನಾಲೆ ಸೀಳಿ ರೈತರಿಗೆ ಮರಣಶಾಸನ ಬರೆಯಲು ಹೊರಟಿದ್ದು, ನಮ್ಮ ಭಾಗದ ರೈತರಿಗೆ ಅನ್ಯಾಯ ಮಾಡಲು ಹೊರಟಿದೆ. ಈಗಾಗಲೇ ಹಲವು ಹಂತದ ಹೋರಾಟಗಳನ್ನು ಮಾಡಿದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ” ಎಂದು ಕಿಡಿಕಾರಿದರು.

ಸರ್ಕಾರ ಭದ್ರಾ ಬಲದಂಡೆ ಸೀಳಿ ನಡೆಸುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳುತ್ತಾದರೂ ರೈತರ ಕಣ್ಣಿಗೆ ಮಣ್ಣೆರಚಿ ಪೊಲೀಸ್ ಸರ್ಪಗಾವಲಿನಲ್ಲಿ ಹಗಲು ರಾತ್ರಿ ಕಾಮಗಾರಿ ನಡೆಸಲಾಗುತ್ತಿದೆ ಎಂದರು.

“ಪೊಲೀಸ್ ಸರ್ಪಗಾವಲು ಮಧ್ಯೆ ಏಕೆ ಕೆಲಸ ಮಾಡುತ್ತಿದ್ದೀರಿ? ಪ್ರಜಾತಂತ್ರದ ಕಗ್ಗೊಲೆ ಮಾಡುತ್ತಿರುವಿರಾ? ತಪ್ಪು ಎಂದು ತಿಳಿದಿರುವುದಕ್ಕೆ ಪೊಲೀಸ್ ಸರ್ಪಗಾವಲಿನಲ್ಲಿ ಕೆಲಸ ಮಾಡುತ್ತಿದ್ದೀರಿ” ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೀಳಿರುವ ನಾಲೆಗೆ ತಡೆಗೋಡೆ ಕಟ್ಟಬೇಕು, ಪ್ರತಿ ವರ್ಷ ಜುಲೈ 10ಕ್ಕೆ ನೀರು ಬಿಡಬೇಕು, ಆದರೆ ಇನ್ನೂ ನೀರು ಬಿಟ್ಟಿಲ್ಲ. ಈ ವರ್ಷ ವರುಣರಾಯನ ಕೃಪೆಯಿಂದ 174 ಅಡಿ ನೀರು ಸಂಗ್ರಹವಾಗಿದ್ದು, ಈಗ ಐದು ಸಾವಿರ ಕ್ಯೂಸೆಕ್‌ ನೀರು ನದಿಗೆ ಬಿಡುಗಡೆ ಮಾಡುತ್ತಿದ್ದಾರೆ. ನಮ್ಮದು ರೈತಪರ ಹೋರಾಟ ಹಾಗಾಗಿ ಯಾವುದೇ ಕಾರಣಕ್ಕೂ ಹೋರಾಟದಿಂದ ಹಿಂದೆ ಸರಿಯಲ್ಲ ಎಂದರು.

ದಾವಣಗೆರೆ ಜಿಲ್ಲೆಯ ರೈತ ಒಕ್ಕೂಟ ನೇತೃತ್ವದಲ್ಲಿ ಹೋರಾಟ ನಡೆಯುತ್ತಿದ್ದು, ನಾವು ಪಕ್ಷಾತೀತವಾಗಿ ಹೋರಾಟ ಮಾಡುತ್ತಿರುವುದರಿಂದ ಇದುವರೆಗೆ ಯಾವುದೇ ರೈತರಿಗೆ ವಾಹನ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಜಿಲ್ಲೆಯಾದ್ಯಂತ ರೈತರು ಸ್ವಯಂಪ್ರೇರಿತವಾಗಿ ಹೋರಾಟಕ್ಕೆ ಬರುತ್ತಿದ್ದಾರೆ. ಹಾಗಿದ್ದರೂ ಕೆಲವರು ನಮ್ಮ ಹೋರಾಟ ಹತ್ತಿಕ್ಕಲು ಯತ್ನಿಸುತ್ತಿದ್ದಾರೆ ಎಂದು ಆಪಾದಿಸಿದರು.

ಕೆಲವರು ರಾಜಕಾರಣ ಮಾಡುತ್ತಿದ್ದಾರೆ, ರಾಜಕಾರಣ ಬಿಡಬೇಕು. ಚುನಾವಣೆ ಬಂದಾಗ ರಾಜಕಾರಣ ಮಾಡೋಣ, ಮುಖ್ಯಮಂತ್ರಿಗಳು ಖುರ್ಚಿಗಾಗಿ ಕದನ ಮಾಡುತ್ತಿದ್ದಾರೆ. ಇವರಿಗೆ ದೆಹಲಿಗೆ ಹೋಗಲು ಸಮಯವಿದೆ. ಆದರೆ, ರೈತರ ಬಗ್ಗೆ ಕಾಳಜಿ ಇಲ್ಲ. ಗಂಡ-ಹೆಂಡತಿ ಮಧ್ಯೆ ಕೂಸು ಬಡವಾಯ್ತು ಅಂತಾರೆ. ಆ ರೀತಿ ನಿಮ್ಮ ಕುರ್ಚಿ ಕದನದಲ್ಲಿ ರೈತರು ಬಲಿಯಾಗುತ್ತಿದ್ದಾರೆ. ಕುರ್ಚಿ ಕದನ ಬದಿಗೊತ್ತಿ ರೈತರ ಪರ ನಿಲ್ಲಿ ಎಂದು ರೇಣುಕಾಚಾರ್ಯ ಒತ್ತಾಯಿಸಿದರು.

Exit mobile version