Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಧರ್ಮಸ್ಥಳ ಪ್ರಕರಣ: ಕಾಡಿನೊಳಗೆ ಶೋಧ, ಸಿಗದ ಕಳೇಬರ

ಧರ್ಮಸ್ಥಳ ಪ್ರಕರಣ: ಕಾಡಿನೊಳಗೆ ಶೋಧ, ಸಿಗದ ಕಳೇಬರ

0

ಮಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧೆಡೆ ನೂರಾರು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ವಿಶೇಷ ತನಿಖಾ ದಳ (ಎಸ್‌ಐಟಿ)ದ ತನಿಖೆ ಮುಂದುವರೆದಿದ್ದು, ನೇತ್ರಾವತಿ ಸ್ನಾನಘಟ್ಟದ ಸಮೀಪ ಹೆದ್ದಾರಿ ಪಕ್ಕದ ಕಾಡಿನೊಳಗೆ ಶೋಧಕಾರ್ಯ ನಡೆದು ಕಳೇಬರದ ಯಾವುದೇ ಅವಶೇಷಗಳು ಪತ್ತೆಯಾಗಿಲ್ಲ.

ಸಾಕ್ಷಿ ದೂರುದಾರ ಇದುವರೆಗೆ ತೋರಿಸಿದ್ದ 13ನೇ ಜಾಗವನ್ನು ಹೊರತುಪಡಿಸಿ, ಉಳಿದೆಲ್ಲ ಜಾಗಗಳಲ್ಲಿ ಎಸ್‌ಐಟಿ ಶೋಧ ಕಾರ್ಯ ಪೂರ್ಣಗೊಳಿಸಿದೆ. ದೂರುದಾರ ಮೊದಲ ದಿನ ತೋರಿಸಿದ್ದ ಜಾಗಗಳ ಹೊರತಾಗಿ, ಸೋಮವಾರ ತೋರಿಸಿದ್ದ ಬೇರೆ ಜಾಗದಲ್ಲೂ ಶೋಧ ಕಾರ್ಯ ನಡೆಸಿದೆ. ಇಂದು ನೇತ್ರಾವತಿ ಸ್ನಾನಘಟ್ಟದ ಪಕ್ಕದ ಬಯಲಿನಲ್ಲಿರುವ 13ನೇ ಜಾಗದಲ್ಲಿ ಬುಧವಾರ ಶೋಧ ನಡೆಸಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಎಸ್‌ಐಟಿ ತಂಡವು ಸಾಕ್ಷಿ ದೂರುದಾರ ತೋರಿಸಿದ್ದ, 12ನೇ ಜಾಗವಿರುವ ಕಡೆಯಿಂದ ಕಾಡಿನ ಒಳಗೆ ಶೋಧ ನಡೆಸಿದೆ.

ಇದುವರೆಗೆ ಶೋಧ ನಡೆಸಿರುವ ಜಾಗಗಳಲ್ಲಿ ಎರಡು ಕಡೆ ಮೃತದೇಹದ ಅವಶೇಷಗಳು ಸಿಕ್ಕಿವೆ. ಆರನೇ ಜಾಗದಲ್ಲಿ ಗಂಡಸಿನ ಮೃತದೇಹದ ಸಿಕ್ಕಿದ್ದರೆ, ಆತ ಕಾಡಿನೊಳಗೆ ತೋರಿಸಿದ್ದ, ಗುರುತು ಮಾಡದ ಇನ್ನೊಂದು ಜಾಗದಲ್ಲಿ ಮೃತದೇಹದ ತಲೆಬುರುಡೆ, ಬೆನ್ನುಮೂಳೆ ಸೇರಿದಂತೆ 100ಕ್ಕೂ ಹೆಚ್ಚು ಮೂಳೆಗಳು ಸಿಕ್ಕಿದ್ದವು. ಇನ್ನುಳಿದ 11 ಜಾಗಗಳಲ್ಲಿ ಮೃತದೇಹಗಳ ಕುರುಹು ಸಿಕ್ಕಿಲ್ಲ.

ಮೊಹಾಂತಿ ಸಭೆ: ಇಂದು ಎಸ್‌ಐಟಿ ಮುಖ್ಯಸ್ಥರಾಗಿರುವ ಡಿಜಿಪಿ ಪ್ರಣವ್ ಮೊಹಾಂತಿ ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಬಂದಿದ್ದು, ಅಧಿಕಾರಿಗಳ ಸಭೆ ನಡೆಸಿದ್ದಾರೆ. ಶೋಧ ಕಾರ್ಯ ಆರಂಭವಾಗುವುದಕ್ಕೂ ಮುನ್ನ ನಡೆದ ಈ ಸಭೆಯಲ್ಲಿ ಎಸ್‌ಐಟಿಯ ಡಿಐಜಿ ಅನುಚೇತ್, ಎಸ್‌ಪಿ ಜಿತೇಂದ್ರ ಕುಮಾರ್ ದಯಾಮ, ಸಿ.ಎ. ಸೈಮನ್ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

ಹಸ್ತಾಂತರ: ಎರಡು ಕಡೆ ದೊರೆತ ಕಳೇಬರದ ಅವಶೇಷ ದೊರೆತ ಪ್ರಕರಣ ಮತ್ತು ಜಯಂತ್ ಟಿ. ಎಂಬವರು ನೀಡಿದ ದೂರನ್ನು ಧರ್ಮಸ್ಥಳ ಪೊಲೀಸ್ ಠಾಣೆಯಿಂದ ಎಸ್‌ಐಟಿಗೆ ಹಸ್ತಾಂತರಿಸಲಾಗಿದೆ.

ಜಿಪಿಆರ್ ಕೃತಕ ಅಭಾವ ದೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತುಹಾಕಲಾಗಿದೆ ಎನ್ನಲಾದ ಪ್ರಕರಣದಲ್ಲಿ, ಶವಗಳ ಅವಶೇಷಗಳನ್ನು ಹೊರತೆಗೆಯುವ ಪ್ರಕ್ರಿಯೆಯಲ್ಲಿ ಬಳಸಬಹುದಾದ ಭೂಮಿಯ ಒಳಭಾಗವನ್ನು ಸಮೀಕ್ಷೆ ಮಾಡುವ ಉಪಕರಣ ‘ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್’ (ಜಿಪಿಆರ್)ನ ಕೃತಕ ಅಭಾವ ಉಂಟಾಗಿದೆ ಎಂದು 2003ರಲ್ಲಿ ಧರ್ಮಸ್ಥಳದಲ್ಲಿ ಕಾಣೆಯಾಗಿದ್ದಾರೆ ಎನ್ನಲಾದ ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ಅವರ ತಾಯಿ ಸುಜಾತಾ ಭಟ್ ಪರ ವಕೀಲ ಮಂಜುನಾಥ ಎನ್. ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟನೆ ನೀಡಿರುವ ಅವರು, ದೂರು ಸಾಕ್ಷಿದಾರ ಗುರುತಿಸಿರುವ ಸಮಾಧಿ ಸ್ಥಳಗಳಲ್ಲಿ ಅವಶೇಷಗಳನ್ನು ಗುರುತಿಸುವಲ್ಲಿ ಎಸ್‌ಐಟಿಗೆ ನೆರವಾಗಲು ಆಧುನಿಕ ಜಿಪಿಆರ್ ತಂತ್ರಜ್ಞಾನವನ್ನು ಬಳಸುವಂತೆ ಸುಜಾತಾ ಭಟ್ ಎಸ್‌ಐಟಿ ಅಧಿಕಾರಿಗಳಿಗೆ ಈಗಾಗಲೇ ಮನವಿ ಮಾಡಿದ್ದಾರೆ. ಸಮಗ್ರ ಹಾಗೂ ವೈಜ್ಞಾನಿಕ ತನಿಖೆ ನಡೆಸಲು ಈ ಸಲಕರಣೆಯು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version