Home ನಮ್ಮ ಜಿಲ್ಲೆ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ದಿನಾಂಕ, ಪ್ರವೇಶ ಶುಲ್ಕ ವಿವರ

ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ ದಿನಾಂಕ, ಪ್ರವೇಶ ಶುಲ್ಕ ವಿವರ

0

ಬೆಂಗಳೂರು: ಉದ್ಯಾನ ನಗರಿ ಬೆಂಗಳೂರಿನಲ್ಲಿ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನ-2025ಕ್ಕೆ ಚಾಲನೆ ಸಿಕ್ಕಿದೆ. ಈ ಬಾರಿಯ ವಿಶೇಷ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನವಾಗಿದೆ. ಆಗಸ್ಟ್‌ 7 ರಿಂದ 18ರ ತನಕ ಜನರು ಫಲಪುಷ್ಪ ಪ್ರದರ್ಶನವನ್ನು ವೀಕ್ಷಣೆ ಮಾಡಬಹುದು.

ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ವೀರರಾಣಿ ಕಿತ್ತೂರು ಚೆನ್ನಮ್ಮ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ವಿಷಯಾಧಾರಿತ ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟಿಸಿದರು.

ರಾಣಿ ಚೆನ್ನಮ್ಮ ಮತ್ತು ಸಂಗೊಳ್ಳಿ ರಾಯಣ್ಣರ ಜೀವನ, ಸಾಧನೆ, ಹೋರಾಟದ ಹಾದಿಯನ್ನು ಪುಷ್ಪಗಳಲ್ಲಿ ಅನಾವರಣಗೊಳಿಸಲಾಗಿದೆ. ಕಿತ್ತೂರಿನ ಐತಿಹಾಸಿಕ ಕೋಟೆ ಹೂವುಗಳಲ್ಲಿ ಮೂಡಿಬಂದಿದೆ. ಈ ಬಾರಿಯ ಪ್ರದರ್ಶನಕ್ಕೆ 10 ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡುವ ನಿರೀಕ್ಷೆ ಇದೆ.

ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವು ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 7 ರಿಂದ 18ರ ವರೆಗೆ ನಡೆಯಲಿದೆ. ಜನರು ಬಿಎಂಟಿಸಿ ಬಸ್, ಖಾಸಗಿ ವಾಹನ, ನಮ್ಮ ಮೆಟ್ರೋ ಮೂಲಕ ಸುಲಭವಾಗಿ ಲಾಲ್‌ಬಾಗ್ ತಲುಪಬಹುದು. ವಾಹನಗಳ ಪಾರ್ಕಿಂಗ್ ಕುರಿತು ಈಗಾಗಲೇ ಬೆಂಗಳೂರು ನಗರ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.

ವಾಹನ ನಿಲುಗಡೆ ಎಲ್ಲಿ ಮಾಡಬೇಕು?: ಸ್ವಾತಂತ್ರ್ಯೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಬರುವ ಜನರು ಹಾಪ್‌ಕಾಮ್ಸ್ ಆವರಣ, ಜೆ.ಸಿ.ರಸ್ತೆಯ ಬಹುಮಹಡಿ ಕಟ್ಟಡ, ಶಾಂತಿ ಬಸ್ ನಿಲ್ದಾಣದ ಬಹುಮಹಡಿ ಕಟ್ಟಡ, ಅಲ್ ಅಮೀನ್ ಕಾಲೇಜು ಮೈದಾನದಲ್ಲಿ ಕಾರುಗಳನ್ನು ನಿಲ್ಲಿಸಬಹದು.

ಆನ್‌ಲೈನ್ ಟಿಕೆಟ್ ಬುಕ್ ಮಾಡಲು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ

ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ಶಮ್ಲಾ ಇಕ್ಬಾಲ್ ಮಾತನಾಡಿ, “ಲಾಲ್‌ಬಾಗ್‌ನಲ್ಲಿ ಆಗಸ್ಟ್‌ 7 ರಿಂದ 18ರ ವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಇದು ತೋಟಗಾರಿಕೆ ಇಲಾಖೆಯ 218ನೇ ಫಲಪುಷ್ಪ ಪ್ರದರ್ಶನವಾಗಿದೆ” ಎಂದು ಹೇಳಿದರು.

ಜನರು ಲಾಲ್‌ಬಾಗ್‌ನಲ್ಲಿ ಗಾಜಿನ ಮನೆಯ ಕೇಂದ್ರ ಭಾಗದ ಬಲಬದಿಯಲ್ಲಿ ಕೋಟೆ ವಿನ್ಯಾಸ, ವರ್ಟಿಕಲ್ ಗಾರ್ಡನ್ ಮಾದರಿ, ರಾಷ್ಟ್ರ ಲಾಂಛನ ಹಾಗೂ ಜಾನಪದ ಕಲಾವಿದರ ಕಲಾಕೃತಿಗಳನ್ನು ವೀಕ್ಷಣೆ ಮಾಡಬಹುದು.

ಎಡಭಾಗದಲ್ಲಿ ಆಲದಮರ, ಅಶ್ವಾರೂಢ ಸಂಗೊಳ್ಳಿ ರಾಯಣ್ಣನ ಪ್ರತಿಮೆ, ರಾಯಣ್ಣ ಹುತಾತ್ಮರಾದ ಸನ್ನಿವೇಶವನ್ನು ನೋಡಬಹುದು. ರಾಣಿ ಚೆನ್ನಮ್ಮರ ಐಕ್ಯ ಸ್ಮಾರಕದ ಪುಷ್ಪ ಮಾದರಿ ಸಹ ಗಮನ ಸೆಳೆಯಲಿದೆ.

ಕಿತ್ತೂರು ಕೋಟೆಯು 18 ಅಡಿ ಎತ್ತರ ಇರಲಿದೆ, 34 ಅಡಿ ಸುತ್ತಳತೆ ಹೊಂದಿದೆ. ಒಂದು ಬಾರಿಗೆ ಹಸಿರು, ಕಂದು ಹಾಗೂ ಗುಲಾಬಿ ಬಣ್ಣದ 1.5 ಲಕ್ಷ ಡಚ್ ಗುಲಾಬಿ ಹೂವು, 1.5 ಲಕ್ಷ ಹೈಬ್ರೀಡ್ ಸೇವಂತಿ, 30 ಸಾವಿರ ಕೋಲ್ಕತ್ತ ಸೇವಂತಿ ಹೂವು ಬಳಕೆ ಮಾಡಿಕೊಡು ಈ ಪರಿಕಲ್ಪನೆ ತಯಾರು ಮಾಡಲಾಗಿದೆ.

ವಾರಾಂತ್ಯದಲ್ಲಿ, ರಜೆ ದಿನಗಳಲ್ಲಿ ನಮ್ಮ ಮೆಟ್ರೋ ಲಾಲ್‌ಬಾಗ್‌ಗೆ ಬಂದು ಹೋಗುವ ಜನರ ಅನುಕೂಲಕ್ಕಾಗಿ ವಿಶೇಷ ಟಿಕೆಟ್ ವ್ಯಸ್ಥೆಯನ್ನು ಮಾಡುತ್ತದೆ. ಈ ಕುರಿತು ಶೀಘ್ರದಲ್ಲಿಯೇ ಬಿಎಂಆರ್‌ಸಿಎಲ್ ಪ್ರಕಟಣೆ ಮೂಲಕ ಮಾಹಿತಿ ನೀಡಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version