ಶಿವಮೊಗ್ಗ: ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಯ ಹರಿಹರ ಸಂಪರ್ಕಿಸುವ 79 ಕಿ.ಮೀ. ಹೊಸ ರೈಲು ಮಾರ್ಗ ಯೋಜನೆ ಸ್ಥಗಿತಗೊಂಡಿದೆ. ಕರ್ನಾಟಕದ ಅನೇಕ ಯೋಜನೆಗಳು ಭೂಸ್ವಾಧೀನ ನಿಧಾನಗತಿಯಿಂದಾಗಿ ವಿಳಂಬವಾಗುತ್ತಿವೆ ಎಂದು ಕೇಂದ್ರ ರೈಲ್ವೆ ಖಾತೆ ಸಚಿವ ಅಶ್ಚಿನಿ ವೈಷ್ಣವ್ ಆರೋಪ ಮಾಡಿದ್ದಾರೆ.
ಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ಯೋಜನೆ ಮಂಜೂರು ಮಾಡಲಾಗಿತ್ತು. ಆದರೆ ಕರ್ನಾಟಕ ಸರ್ಕಾರದ ಭೂಸ್ವಾಧೀನ, ವೆಚ್ಚ ಹಂಚಿಕೆಯ ವಿಳಂಬದಿಂದ ಯೋಜನೆ ಸ್ಥಗಿತವಾಗಿದೆ ಎಂದು ಅಶ್ವಿನಿ ವೈಷ್ಣವ್ ದೂರಿದ್ದಾರೆ.
ಕರ್ನಾಟಕದಲ್ಲಿ ರೈಲು ಸಂಪರ್ಕ ಹೆಚ್ಚಿಸಲು, ಭಾರತೀಯ ರೈಲ್ವೆ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಸಂಪೂರ್ಣವಾಗಿ/ಭಾಗಶಃ 42,517 ಕೋಟಿ ವೆಚ್ಚದ 3,264 ಕಿ.ಮೀ. ಉದ್ದದ 25 ಯೋಜನೆಗಳು (15 ಹೊಸ ಮಾರ್ಗಗಳು, 10 ಜೋಡಿ ಮಾರ್ಗ) ಮಂಜೂರಾಗಿದೆ. ಇವುಗಳಲ್ಲಿ 1,394 ಕಿ.ಮೀ. ಉದ್ದ ಯೋಜನೆಗಳು ಕಾರ್ಯಾರಂಭ ಮಾಡಿವೆ ಎಂದು ಸಚಿವರು ಹೇಳಿದ್ದಾರೆ.
ಶಿವಮೊಗ್ಗ-ಹರಿಹರ ರೈಲು ಮಾರ್ಗ: ಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶೇ 50:50 ವೆಚ್ಚ ಹಂಚಿಕೆ ಆಧಾರದ ಮೇಲೆ ಮಂಜೂರು ಮಾಡಲಾಗಿತ್ತು.
ಕರ್ನಾಟಕ ಸರ್ಕಾರವು 1832 ಕೋಟಿ ವೆಚ್ಚದಲ್ಲಿ ಉಚಿತವಾಗಿ ಭೂಮಿಯನ್ನು ಒದಗಿಸಬೇಕಾಗಿದೆ. ಈ ಯೋಜನೆಗಾಗಿ 488 ಹೆಕ್ಟೇರ್ ವಿಸ್ತೀರ್ಣದ ಸಂಪೂರ್ಣ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ರೈಲ್ವೆಯು ಕರ್ನಾಟಕ ಸರ್ಕಾರವನ್ನು ಕೋರಿತ್ತು.
ಆದಾಗ್ಯೂ ವೆಚ್ಚವನ್ನು ಹಂಚಿಕೊಳ್ಳಲು ಮತ್ತು ಉಚಿತವಾಗಿ ಭೂಮಿಯನ್ನು ಒದಗಿಸಲು ಕರ್ನಾಟಕ ಸರ್ಕಾರ ಅಸಮರ್ಥತೆ ತೋರಿಸಿದೆ. ಈ ಕಾರಣದಿಂದಾಗಿ ಯೋಜನೆಯು ಸ್ಥಗಿತಗೊಂಡಿದೆ ಎಂದು ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
ಶಿವಮೊಗ್ಗ-ರಾಣೆಬೆನ್ನೂರು ಹೊಸ ಮಾರ್ಗ (96 ಕಿ.ಮೀ.), ಬೆಳಗಾವಿ-ಧಾರವಾಡ ಹೊಸ ಮಾರ್ಗ (73 ಕಿ.ಮೀ.), ವೈಟ್‌ಫೀಲ್ಡ್-ಕೋಲಾರ (53 ಕಿ.ಮೀ.) ಹೊಸ ಮಾರ್ಗ, ಹಾಸನ-ಬೇಲೂರು (27 ಕಿ.ಮೀ.) ಹೊಸ ಮಾರ್ಗ ಕಾಮಗಾರಿಗಳಿವೆ. ಆದರೆ ಈ ಎಲ್ಲಾ ಕಾಮಗಾರಿ ಭೂ ಸ್ವಾಧೀನದ ಕಾರಣ ವಿಳಂಬವಾಗಿದೆ.
ಶಿವಮೊಗ್ಗ-ಹರಿಹರ ಹೊಸ ರೈಲು ಮಾರ್ಗ ಹಲವು ವರ್ಷಗಳ ಕನಸು. ಈ ಯೋಜನೆಗೆ 2 ಬಾರಿ ಸಮೀಕ್ಷೆಗಳು ನಡೆದಿವೆ. ಮೊದಲು 2009-10 ಸಮೀಕ್ಷೆ ನಡೆದಿತ್ತು. ತಾಂತ್ರಿಕ ಕಾರಣಕ್ಕೆ ಮತ್ತೆ 2012 ರಲ್ಲಿ ಸಮೀಕ್ಷೆ ನಡೆಸಲಾಯಿತು. ಆದರೆ 2025ರಲ್ಲಿಯೂ ಯೋಜನೆ ಪೂರ್ಣಗೊಂಡಿಲ್ಲ.
ದಶಕಗಳ ಹಿಂದೆಯೇ ಹರಿಹರ ಮಾರ್ಗದ ಭೂ ಸ್ವಾಧೀನಕ್ಕೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ 10 ಕೋಟಿ ರೂ. ಘೋಷಣೆ ಮಾಡಿತ್ತು. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಬೃಹತ್ ಫೌಂಡ್ರಿಗಳಿವೆ. ಅಲ್ಲದೇ ವಿವಿಧ ಉದ್ಯಮಗಳು ಸರಕು ಸಾಗಣೆ ಮಾಡಲು ಚಿಕ್ಕಮಗಳೂರು ಜಿಲ್ಲೆಯ ಬೀರೂರಿಗೆ ತೆರಳಿ ಅಲ್ಲಿಂದ ಚಿತ್ರದುರ್ಗ, ಚಿಕ್ಕಜಾಜೂರು, ದಾವಣಗೆರೆ ಮಾರ್ಗವಾಗಿ ಹರಿಹರಕ್ಕೆ ಸಂಚಾರ ನಡೆಸಬೇಕು. ಆದರೆ ಶಿವಮೊಗ್ಗ-ಹರಿಹರ ಮಾರ್ಗ ಪೂರ್ಣಗೊಂಡರೆ 80 ಕಿ.ಮೀ. ದೂರವನ್ನು ತಲುಪಬಹುದಿತ್ತು.
ಕೈಗಾರಿಕಾ ಉತ್ಪನ್ನಗಳ ಸಾಗಣೆ, ಜನರ ಸಂಚಾರಕ್ಕೆ ಶಿವಮೊಗ್ಗ-ಹರಿಹರ ರೈಲು ಮಾರ್ಗ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಈಗ ರಾಜ್ಯ ಸರ್ಕಾರದ ಕಾರಣದಿಂದ ಯೋಜನೆ ವಿಳಂಬವಾಗುತ್ತಿದೆ. ಆದರೆ ಕೇಂದ್ರ ಸಚಿವರ ಆರೋಪಗಳ ಬಗ್ಗೆ ಕರ್ನಾಟಕದ ಯಾವುದೇ ನಾಯಕರು ಪ್ರತಿಕ್ರಿಯೆ ನೀಡಿಲ್ಲ.