ಬಾಗಲಕೋಟೆ(ಕುಳಗೇರಿ ಕ್ರಾಸ್): ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 8ಕ್ಕೂ ಹೆಚ್ಚು ಮೇವಿನ ಬಣವಿಗಳು ಹಾಗೂ ರಾಶಿ ಮಾಡಿದ ತೆನೆಯ ಸೊಪ್ಪು ಸೇರಿ ತಾಡಪಾಲು ಸಹ ಸುಟ್ಟು ಭಸ್ಮವಾದ ಘಟನೆ ಸೋಮನಕೊಪ್ಪ ಗ್ರಾಮದ ಮಡ್ಡಿಯಲ್ಲಿ ನಡೆದಿದೆ.
ಸುಟ್ಟು ಹೋಗಿರುವ ಬಣವಿಗಳು ಸೋಮನಕೊಪ್ಪ ಗ್ರಾಮದ ಶಿವಪ್ಪ ಬಿಲ್ಲಾರ, ಬಾಲಪ್ಪ ಮಾದರ, ಶಿವಾನಂದ ಮಾದರ, ಸುರೇಶ ಮಾದರ, ದ್ಯಾವಪ್ಪ ದಂಡಿನ, ಬಸವರಾಜ ದಂಡಿನ, ಲಕ್ಷ್ಮಣ ಬಿಲ್ಲಾರ, ಪರಸಪ್ಪ ಮೆಟ್ಲಾರ್, ಶ್ರೀಕಾಂಗೌಡ ಗೌಡರ ಸೇರಿದಂತೆ 8ಕ್ಕೂ ಹೆಚ್ಚು ರೈತರಿಗೆ ಸೇರಿದ ಬಣವಿಗಳು ಭಸ್ಮವಾಗಿವೆ ಎಂದು ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಬಾದಾಮಿ ಅಗ್ನಿಶಾಮಕ ದಳದ ಬಿ.ಪಿ. ಮರಡಿ ನೇತೃತ್ವ ಸಿಬ್ಬಂದಿ ಬರುವಷ್ಟರಲ್ಲೇ ಎಂಟು ಬಣವಿಗಳು ಸುಟ್ಟು ಭಸ್ಮವಾಗಿದ್ದವು. ಸ್ಥಳದಲ್ಲೇ ಇದ್ದ ಕೆಲ ರೈತರ ಪ್ರಯತ್ನದಿಂದ ಒಂದು ಬಣವಿ ಮಾತ್ರ ಉಳಿದುಕೊಂಡಿದ್ದು ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನ ನಂದಿಸಿ ಮರಳಿದರು.
ಶಾರ್ಟ್ ಸರ್ಕ್ಯೂಟ್‌ನಿಂದ ಬಾರಿ ನಷ್ಟ ಅನುಭವಿಸಿದ ರೈತರಿಗೆ ಹೆಸ್ಕಾಂ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಹೆಸ್ಕಾಂನ ಸೆಕ್ಷೆನ್ ಆಫಿಸರ್ ಬಿ.ಪಿ. ಕೊಳ್ಳಿ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.