Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಮುಧೋಳದಲ್ಲಿ ರೈತ ಸಂಘದಿಂದ ಅಷ್ಟ ದಿಗ್ಬಂಧನ

ಬಾಗಲಕೋಟೆ: ಮುಧೋಳದಲ್ಲಿ ರೈತ ಸಂಘದಿಂದ ಅಷ್ಟ ದಿಗ್ಬಂಧನ

0

ಬಾಗಲಕೋಟೆ(ಮುಧೋಳ): ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಸ್ಥಬ್ಧಗೊಂಡಿದೆ. ಆದರೆ ಬಾಗಲಕೋಟೆ ಜಿಲ್ಲೆಯಲ್ಲಿ ಮಾತ್ರ ಇನ್ನಷ್ಟು ಉಗ್ರರೂಪಕ್ಕೆ ತಿರುಗಿದೆ.

ರಾಜ್ಯ ರೈತ ಸಂಘ, ಹಸಿರು ಸೇನೆ ಮತ್ತು ಬಾಗಲಕೋಟೆ ಜಿಲ್ಲಾ ಕಬ್ಬು ಬೆಳೆಗಾರರು ಟನ್‌ಗೆ 3500 ರೂ. ಹಾಗೂ ಹಿಂಬಾಕಿಯನ್ನು ಕಾರ್ಖಾನೆ ಮಾಲೀಕರು ನೀಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರಿಸಿದ್ದಾರೆ. ಬುಧವಾರ ರೈತರು ಮುಧೋಳ ಸಂಪರ್ಕಿಸುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿದ್ದಾರೆ. ಶಾಲಾ ವಾಹನ ಹಾಗೂ ಅಂಬುಲೆನ್ಸ್‌ಗಳನ್ನು ಬಿಟ್ಟು ಉಳಿದೆಲ್ಲ ವಾಹನಗಳಿಗೆ ನಿರ್ಬಂಧ ಹಾಕಿದ್ದಾರೆ.

ಮುಧೋಳ ನಗರಕ್ಕೆ ಸಂಪರ್ಕಿಸುವ ಎಲ್ಲ ಗ್ರಾಮೀಣ ಹಾಗೂ ನಗರದ ವಿಜಯಪುರ-ಬೆಳಗಾವಿ ರಾಜ್ಯ ಹೆದ್ದಾರಿಯ ಸಂಗೊಳ್ಳಿ ರಾಯಣ್ಣ ವೃತ್ತ ಸೇರಿದಂತೆ ಎಲ್ಲ ರಸ್ತೆಗಳಲ್ಲಿ ಮುಳ್ಳು, ಕಲ್ಲು ಇಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಮುಧೋಳ-ಬೀಳಗಿ, ವಿಜಯಪುರ-ಬೆಳಗಾವಿ, ಜಮಖಂಡಿ-ಬಾಗಲಕೋಟೆ, ಮುಧೋಳ-ನಿಪ್ಪಾಣಿ ರಾಜ್ಯ ಹೆದ್ದಾರಿ ಸೇರಿ ಎಲ್ಲ ಕಡೆ ರಸ್ತೆ ಬಂದ್ ಆಗಿದ್ದರಿಂದ ಪ್ರಯಾಣಿಕರು ಪ್ರಯಾಸ ಪಡಬೇಕಾದ ಪರಿಸ್ಥಿತಿ ಉಂಟಾಗಿದೆ. ಕೆಲವು ಕಡೆ ರಸ್ತೆಯಲ್ಲಿರುವ ವಾಹನಗಳಲ್ಲಿನ ಪ್ರಯಾಣಿಕರು ಊಟಕ್ಕೂ ಪರದಾಡುವಂತಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ರೈತ ಹೋರಾಟಗಾರ ಸುಭಾಸ ಶಿರಬೂರ ಮಂಗಳವಾರ ತಡರಾತ್ರಿ ನಡೆದ ಎರಡನೆಯ ಸಂಧಾನ ಸಭೆಯೂ ವಿಫಲವಾಗಿದೆ ಎಂದು ಹೇಳಿದರು. ಇನ್ನು ಮುಂದೆ ಪ್ರತಿಭಟನೆಯನ್ನು ನಾನಾ ರಾತಿಯಲ್ಲಿ ಮಾಡಲಾಗುವುದು, ಹೋರಾಟ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಅಧಿಕಾರಿಗಳಿಗೆ ದಿಗ್ಬಂಧನ: ರೈತ ಸಂಘದವರು ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ದಿಗ್ಬಂಧನ ಹಾಕಿದ್ದರಿಂದ ಅಧಿಕಾರಿಗಳು ಪರದಾಡುವಂತಾಯಿತು. ಈ ವೇಳೆ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ವಿಜಯಪುರ-ಬೆಳಗಾವಿ ರಸ್ತೆ ತಡೆ ನಡೆಸಿರುವುದರಿಂದ ಸರ್ಕಾರಿ ಬಸ್ ಹಾಗೂ ಬೈಕ್ ಮೇಲೆ ಬರುವ ಶಾಲಾ-ಕಾಲೇಜು ವಿದ್ಯಾರ್ಥಿಗಳು ನಡೆದುಕೊಂಡು ಹೋಗುವ ದೃಶ್ಯಗಳು ಕಂಡು ಬಂದವು.

NO COMMENTS

LEAVE A REPLY

Please enter your comment!
Please enter your name here

Exit mobile version