ಬಾಗಲಕೋಟೆ: ಮುಧೋಳ ತಾಲೂಕಿನಲ್ಲಿ ತೀವ್ರಗೊಂಡಿದ್ದ ಕಬ್ಬು ಬೆಳೆಗಾರರ ಹೋರಾಟದ ತಣ್ಣಗಾಗುತ್ತಿದ್ದಂತೆ ಜಿಲ್ಲೆಯ ಬೀಳಗಿ ತಾಲೂಕಿನ ಹೋರಾಟದ ಕಾವು ಏರತೊಡಗಿದೆ. ಇಳುವರಿ ಷರತ್ತು ಇಲ್ಲದೇ ಪ್ರತಿ ಟನ್ ಕಬ್ಬಿಗೆ 3300 ರೂ.ಗಳನ್ನು ನೀಡುವಂತೆ ಅಲ್ಲಿರುವ ಜೆಮ್ ಹಾಗೂ ಬೀಳಗಿ ಶುಗರ್ಸ್‌ಗೆ ಕಬ್ಬು ಪೂರೈಸುವ ರೈತರೂ ಈಗ ಪಟ್ಟು ಬಿಗಿಗೊಳಿಸುತ್ತಿದ್ದಾರೆ. ಹೀಗಾಗಿ ಅಲ್ಲಿನ ತಾಲೂಕಾಡಳಿತ ಎರಡೂ ಕಾರ್ಖಾನೆ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದೆ.
ಈ ಕುರಿತು ಆದೇಶ ಹೊಡಿಸಿರುವ ಬೀಳಗಿ ತಹಶೀಲ್ದಾರ್ ವಿನೋದ ಹತ್ತಳ್ಳಿ ಅವರು ಇತ್ತೀಚೆಗಿನ ಸಮೀರವಾಡಿ ಸಕ್ಕರೆ ಕಾರ್ಖಾನೆಯಲ್ಲಿ ಟ್ರ್ಯಾಕ್ಟರ್‌ಗಳಿಗೆ ಬೆಂಕಿಯಿಟ್ಟ ಪ್ರಕರಣ ಹಾಗೂ ಈ ಹಿಂದೆ ಕರ್ನಾಟಕ ಹೈಕೋರ್ಟ್‌ನ ಧಾರವಾಡದ ಸಂಚಾರಿ ಪೀಠದ ಆದೇಶವನ್ನು ಉಲ್ಲಂಘಿಸಿ ನ. 18ರ ಮಂಗವಾರದಿಂದ ನ. 21ರವರೆಗೆ ಜಾರಿಗೆ ಬರುವಂತೆ ಕುಂದರಗಿಯ ಜೆಮ್ ಶುಗರ್ಸ್ ಹಾಗೂ ಬಾಡಗಂಡಿಯ ಬೀಳಗಿ ಶುಗರ್ಸ್‌ನಿಂದ ಐದು ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿಭಟನೆ, ಗುಂಪು ಸೇರದಂತೆ ನಿರ್ಬಂಧಿಸಿ ನಿಷೇಧಾಜ್ಞೆ ಹೊರಡಿಸಿದ್ದಾರೆ.
ಮುಧೋಳದಲ್ಲಿ ರೈತರು ಹೋರಾಟ ತೀವ್ರಗೊಳಿಸಿದ ನಂತರ ಎಂಆರ್‌ಎನ್ ಸಕ್ಕರೆ ಕಾರ್ಖಾನೆ, ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ, ಗೋದಾವರಿ ಸಕ್ಕರೆ ಕಾರ್ಖಾನೆ ಹಾಗೂ ಉತ್ತೂರಿನ ಐಸಿಪಿಎಲ್ ಕಾರ್ಖಾನೆಗಳು ರೈತರೊಂದಿಗೆ ಒಮ್ಮತಕ್ಕೆ ಬಂದು ಯಾವುದೇ ಇಳುವರಿಯ ಷರತ್ತುಗಳು ಇಲ್ಲದೇ ಮೊದಲ ಕಂತಿನ 3200 ರೂ., ಸರ್ಕಾರ ತನ್ನ ಸಬ್ಸಿಡಿ ಮೊತ್ತ 50 ರೂ.ಗಳನ್ನು ನೀಡಿದ ನಂತರ ಎರಡನೇ ಕಂತಿನ 50 ರೂ.ಗಳನ್ನು ಪಾವತಿಸುವುದಾಗಿ ಒಪ್ಪಿದ ನಂತರ ಅಲ್ಲಿನ ರೈತರು ಹೋರಾಟ ಕೈಬಿಟ್ಟಿದ್ದಾರೆ. ಬೀಳಗಿ ತಾಲೂಕಿನ ಎರಡೂ ಕಾರ್ಖಾನೆಗಳು ಸರ್ಕಾರದ ದರಕ್ಕೆ ಒಪ್ಪಿಗೆ ಸೂಚಿಸಿ ಅಷ್ಟು ಮೊತ್ತವನ್ನು ನೀಡುವುದಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಮುಧೋಳ ಮಾದರಿಯಲ್ಲೇ ತಮಗೂ ಪ್ರತಿ ಟನ್‌ಗೆ 3300 ರೂ.ಗಳು ಸಂದಾಯವಾಗುವ ರೀತಿಯಲ್ಲಿ ದರ ಘೋಷಿಸಬೇಕೆಂದು ಪಟ್ಟು ಹಿಡಿದ್ದಾರೆ. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲಯಲ್ಲಿ ತಹಶೀಲ್ದಾರ್ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
