Home ನಮ್ಮ ಜಿಲ್ಲೆ ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್

ಅಧಿವೇಶನಕ್ಕೆ ಪ್ರತಿಯಾಗಿ ಮಹಾಮೇಳಾವ್

0

ಬೆಳಗಾವಿ: ನಾಯಿ ಬಾಲ ಡೊಂಕು ಎನ್ನುವಂತೆ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಮತ್ತೆ ಚಳಿಗಾಲ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ನಡೆಸುವ ಭಂಡತನದ ನಿರ್ಧಾರ ಮಾಡಿದೆ.
ಇಲ್ಲಿನ ಸುವರ್ಣ ವಿಧಾನ ಸೌಧದಲ್ಲಿ ಡಿ. ೪ರಿಂದ ೧೦ ದಿನಗಳ ಕಾಲ ಚಳಿಗಾಲ ಅಧಿವೇಶನ ನಡೆಯಲಿದೆ. ಅದಕ್ಕೆ ಪ್ರತಿಯಾಗಿ ಎಂಇಎಸ್ ಮಹಾಮೇಳಾವ್‌ಗೆ ಸಿದ್ಧತೆ ನಡೆಸುವ ಮೂಲಕ ಗಡಿ ಜಿಲ್ಲೆಯಲ್ಲಿ ಮತ್ತೆ ಭಾಷಾ ದ್ವೇಷದ ಕಿಡಿ ಹಚ್ಚಲು ಮುಂದಾಗಿದೆ.
ಮರಾಠಾ ಮಂದಿರದಲ್ಲಿ ಸಭೆ ಸೇರಿ ಮಹಾಮೇಳಾವ್ ನಡೆಸಲು ಎಂಇಎಸ್ ತೀರ್ಮಾನ ಕೈಗೊಳ್ಳುವ ಮೂಲಕ ಗಡಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಮಹಾಮೇಳಾವ್ ಯಶಸ್ಸಿಗಾಗಿ ಬೆಳಗಾವಿ ಮತ್ತು ಖಾನಾಪುರದಲ್ಲಿ ಸಮಿತಿ ರಚನೆಗೆ ತಯಾರಿ ನಡೆಸುತ್ತಿದ್ದು ಈ ವಿಷಯವನ್ನು ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ಸಚಿವರ ಗಮನಕ್ಕೆ ತರಲು ನಿರ್ಧರಿಸಿದ್ದಾರೆ. ಅಲ್ಲದೇ ಮಹಾರಾಷ್ಟ್ರದ ನಾಯಕರನ್ನು ಕರ್ನಾಟಕಕ್ಕೆ ಆಹ್ವಾನಿಸಿ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಸಮಿತಿ ಮುಂದಾಗಿದೆ.
ಪ್ರತಿ ವರ್ಷ ಬೆಳಗಾವಿಯಲ್ಲಿ ನಡೆಯುವ ಚಳಿಗಾಲ ಅಧಿವೇಶನ ಪ್ರತಿಯಾಗಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸುತ್ತ ಬಂದಿದ್ದಾರೆ.
ಕಳೆದ ವರ್ಷ ಮಹಾಮೇಳಾವ್‌ಗೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿತ್ತು. ಪದೇ ಪದೇ ಗಡಿ ವಿವಾದ ಕೆದಕುತ್ತಿರುವ ಎಂಇಎಸ್ ಕಾರ್ಯಕರ್ತರು ಕನ್ನಡ ಮತ್ತು ಮರಾಠಿ ಜನರ ನಡುವೆ ಭಾಷಾ ಕಿಡಿ ಹೊತ್ತಿಸಲು ಯತ್ನಿಸುತ್ತಿದ್ದಾರೆ. ಮಹಾಮೇಳಾವ್ ನಡೆಸುವ ಎಂಇಎಸ್ ನಿರ್ಧಾರಕ್ಕೆ ಕನ್ನಡಿಗರು ವಿರೋಧ ವ್ಯಕ್ತಪಡಿಸಿದ್ದು, ಅನುಮತಿ ನೀಡದಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

Exit mobile version