ಬೆಳಗಾವಿ: ದ್ವಿಚಕ್ರವಾಹನ ಮೇಲೆ ಹೊರಟಿದ್ದ ಇಬ್ಬರು ಸಂಬಂಧಿಗಳು ಜಿಲ್ಲೆಯ ಘಟಪ್ರಭಾ ನದಿಯಲ್ಲಿ ಕೊಚ್ಚಿಹೋದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಅವರಾಧಿ ಬಳಿ ನಡೆದಿದೆ.
ಜಿಲ್ಲೆಯ ಗೋಕಾಕ ತಾಲೂಕಿನ ಅವರಾಧಿ ಸೇತುವೆ ಮೇಲೆ ನಿಯಂತ್ರಣ ತಪ್ಪಿ ಘಟಪ್ರಭಾ ನದಿಗೆ ದ್ವಿಚಕ್ರವಾಹನ ಬಿದ್ದಿದೆ. ಚನ್ನಪ್ಪ ಹರಿಜನ್(30), ದುರ್ಗವ್ವ ಹರಿಜನ್(25) ಕೊಚ್ಚಿಹೋದ ಸಂಬಂಧಿಗಳಾಗಿದ್ದಾರೆ. ಅವರಾಧಿ ಗ್ರಾಮದಿಂದ ಮಹಾಲಿಂಗಪುರಕ್ಕೆ ಇಬ್ಬರು ಹೊರಟಿದ್ದರು. ಈ ವೇಳೆ ಈ ಘಟನೆ ಸಂಭವಿಸಿದೆ.
ಸೇತುವೆ ಬಳಿ ದ್ವಿಚಕ್ರವಾಹನ ಪತ್ತೆಯಾಗಿದೆ. ಕೊಚ್ಚಿ ಹೋಗಿರುವ ಇಬ್ಬರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿ ಮಳೆಯ ಅಬ್ಬರ ಹೆಚ್ಚಾಗಿರುವ ಹಿನ್ನಲೆಯಲ್ಲಿ ಘಟಪ್ರಭಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಹರಿವು ಬರುತ್ತಿದೆ. ಘಟನಾ ಸ್ಥಳಕ್ಕೆ ಎಸ್‌ಡಿಆರ್‌ಎಫ್ ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿ ಶೋಧಕಾರ್ಯ ಆರಂಭಿಸಿದ್ದಾರೆ. ಈ ಕುರಿತು ಕುಲಕೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.