ಚೆನ್ನಮ್ಮನ ಕಿತ್ತೂರು: ಏಳು ವರ್ಷದ ಮಗಳಿಗೆ ನೇಣು ಹಾಕಿ ಕೊಂದು ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ತಾಲೂಕಿನ ದಿಂಡಲಕೊಪ್ಪ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಮಗಳು ಚಾಂದನಿ ಇಂಚಲ(7) ಅವಳಿಗೆ ನೇಣು ಬಿಗಿದು ನಂತರ ತಾಯಿ ಮಹದೇವಿ ನಾಯಕಪ್ಪ ಇಂಚಲ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ದಿಂಡಲಕೂಪ್ಪ ಗ್ರಾಮದ ತವರು ಮನೆಯಲ್ಲಿ ತಾಯಿ-ತಂದೆ ಜೊತೆ ಸುಮಾರು 5 ವರ್ಷದಿಂದ ವಾಸವಾಗಿದ್ದಳು. ಅವಳ ಸಹೋದರ ರಂಗಪ್ಪ ಭೀಮಪ್ಪ ಬಿಲ್ಯಾರ್, ಈತನ ಪತ್ನಿ ಅನ್ನಪೂರ್ಣ ಮೃತ ಮಹದೇವಿಗೆ ನಿತ್ಯ ಕಿರುಕುಳ ನೀಡುತ್ತಿದ್ದರು. ಇವರ ಕಿರುಕುಳ ತಾಳದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.