ಚಿಕ್ಕೋಡಿ: ಕನೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದ ಹನುಮ ಮಾಲಾ ಧೀಕ್ಷಾ ಕಾರ್ಯಕ್ರಮದಲ್ಲಿ ತಮ್ಮ ವಾಗ್ವಾಣಿಯನ್ನು ಮತ್ತೊಮ್ಮೆ ತೀವ್ರಗೊಳಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಮತ್ತು ಭಜರಂಗ ದಳ ರಾಯಬಾಗ ಘಟಕದ ವತಿಯಿಂದ ನಡೆದ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸ್ವಾಮೀಜಿ, “ಬಸವ ತತ್ವದ ಅನುಯಾಯಿಗಳು ನಮ್ಮಂತೆ ಕಾವಿ ಧರಿಸಿದ ತಾಲಿಬಾನ್‌ಗಳು” ಎಂದು ಹೇಳಿದ್ದು, ಇದು ಈಗ ಮತ್ತೊಮ್ಮೆ ದೊಡ್ಡ ವಿವಾದಕ್ಕೆ ತುತ್ತಾಗಿದೆ.
ಸ್ವಾಮೀಜಿ ತಮ್ಮ ಭಾಷಣದಲ್ಲಿ ಮುಂದುವರಿದು, “ರಾತ್ರಿ ಟೀ ಶರ್ಟ್ ಬರ್ಮೋಡ ಹಾಕೋದು, ಹೋಟೆಲ್-ಬಾರ್‌ಗೆ ಹೋಗೋದು… ಅಂತವರಿಗೆ ಮಠ ಏಕೆ? ಮಠಗಳನ್ನು ಏಕೆ ಹಾಳು ಮಾಡ್ತಾ ಇದ್ದೀರಿ?” ಎಂದು ಪ್ರಶ್ನೆ ಎತ್ತಿದರು.
ಹಿಂದೆ ಮಹಾರಾಷ್ಟ್ರದ ಒಂದು ಕಾರ್ಯಕ್ರಮದಲ್ಲೂ ಇದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡಿ, ವಿಜಯಪುರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸ್ವಾಮೀಜಿಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಈ ಹಿನ್ನೆಲೆ, ಈಗ ಮತ್ತೆ ಸ್ವಾಮೀಜಿಯ ಹೊಸ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
ಈ ಹೇಳಿಕೆಯಿಂದ ಲಿಂಗಾಯತ ಸಂಘಟನೆಗಳು ಮತ್ತು ಬಸವ ತತ್ವದ ಅನುಯಾಯಿಗಳ ಖಂಡನೆ ವ್ಯಕ್ತವಾಗುವ ಸಾಧ್ಯತೆ ಇದೆ. ಈಗಾಗಲೇ ಸ್ಥಳೀಯ ಮಟ್ಟದಲ್ಲಿ ವಿರೋಧದ ಧ್ವನಿ ಕೇಳಿಬರುತ್ತಿದ್ದು, ಹಿರಿಯ ಮಠಾಧೀಶರು ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿಕ್ರಿಯೆಗಾಗಿ ನಿರೀಕ್ಷೆ ವಲಯದಲ್ಲಿ ಚರ್ಚೆಗಳು ಜೋರಾಗಿವೆ.
