Home ನಮ್ಮ ಜಿಲ್ಲೆ ಕೊಪ್ಪಳ ಫೆ. 15ರ ಬಳಿಕ ಮೊದಲ ಪಟ್ಟಿ ಬಿಡುಗಡೆ

ಫೆ. 15ರ ಬಳಿಕ ಮೊದಲ ಪಟ್ಟಿ ಬಿಡುಗಡೆ

0

ಕುಷ್ಟಗಿ: ಮುಂದಿನ 2023 ವಿಧಾನಸಭೆ ಚುನಾವಣೆ ಮೇ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಜಿಲ್ಲಾಮಟ್ಟದಿಂದ ಮಾಹಿತಿ ಪಡೆದುಕೊಂಡು ರಾಜ್ಯಮಟ್ಟಕ್ಕೆ ಕಳಿಸಿಕೊಡಲಾಗಿದೆ. ಫೆ. 15ರಿಂದ 20ನೇ ತಾರೀಕಿನ ಒಳಗಾಗಿ ಒಂದನೇ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳ್ಳಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಪಟ್ಟಣದ ಶಾಸಕರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಲು ಅರ್ಜಿ ಸಲ್ಲಿಸಿದ್ದಾರೆ. ಜಿಲ್ಲಾ ಮಟ್ಟದಿಂದ ಪರಿಶೀಲನೆ ಮಾಡಲಾಗಿದೆ. ವರದಿಯನ್ನು ಈಗಾಗಲೇ ರಾಜ್ಯಮಟ್ಟಕ್ಕೆ ಕಳುಹಿಸಿಕೊಡಲಾಗಿದೆ. ಫೆ. 2ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಚುನಾವಣಾ ಸಮಿತಿಯ ಸಭೆ ಜರುಗಲಿದೆ. ಅಭ್ಯರ್ಥಿ ಅಂತಿಮಪಟ್ಟಿಯನ್ನು ದೆಹಲಿಯ ಹೈಕಮಾಂಡ್‌ಗೆ ಕಳಿಸಿಕೊಡಲಾಗುತ್ತದೆ ಎಂದರು.
ಫೆ. ೧೫ರಂದು ಮೊದಲನೆ ಹಂತದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಎರಡನೇ ಹಂತದ ಅಭ್ಯರ್ಥಿಗಳ ಪಟ್ಟಿಯನ್ನು ಫೆ. ೨೧ರ ನಂತರ ಬಿಡುಗಡೆ ಮಾಡಲಾಗುತ್ತದೆ. ಕಾಂಗ್ರೆಸ್ ಪಕ್ಷದಿಂದ ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಣೆಯಾದ ನಂತರ ಟಿಕೆಟ್ ಸಿಗದಂತಹ ಮುಖಂಡರನ್ನು ಸಮಾಧಾನ ಮಾಡುವುದು ದೊಡ್ಡ ಸವಾಲಾಗಿದೆ. ಎಲ್ಲಾ ಗೊಂದಲಗಳಿಗೆ ತೆರೆ ಎಳೆದು ಮುಂದೆ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದರು.

Exit mobile version