Home ನಮ್ಮ ಜಿಲ್ಲೆ ಕೊಪ್ಪಳ ಮಂತ್ರಾಲಯ ಶ್ರೀ-ಉತ್ತರಾದಿ ಶ್ರೀ-ಪ್ರಥಮ ಬಾರಿಗೆ ಸಮಾಗಮ

ಮಂತ್ರಾಲಯ ಶ್ರೀ-ಉತ್ತರಾದಿ ಶ್ರೀ-ಪ್ರಥಮ ಬಾರಿಗೆ ಸಮಾಗಮ

0

ಗಂಗಾವತಿ: ತಾಲೂಕಿನ ಆನೆಗೊಂದಿಯ ನವವೃಂದಾವನಗಡ್ಡೆಯಲ್ಲಿ ಶ್ರೀ ಪದ್ಮನಾಭ ತೀರ್ಥರ ಮಧ್ಯಾರಾಧನೆಯ ಸಮಯದಲ್ಲಿ ಯತಿತ್ರಯರ ಸಂಗಮವಾಯಿತು. ಮಂತ್ರಾಲಯ ಶ್ರೀ ರಾಘವೇಂದ್ರಸ್ವಾಮಿ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು, ಆರ್ಯ ಅಕ್ಷೋಭ್ಯ ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ಪಾಲ್ಗೊಂಡು ಭಕ್ತಸಮೂಹವನ್ನು ಅನುಗ್ರಹಿಸಿದರು.

ಶ್ರೀ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ ಪದ್ಮನಾಭ ತೀರ್ಥರು ಸರ್ವರನ್ನೂ ಅನುಗ್ರಹಿಸುವ ಮಹಾಮಹಿಮರು. ಅನೇಕ ಗ್ರಂಥಗಳನ್ನು ರಚಿಸಿ, ಧಾರ್ಮಿಕ ಚಿಂತನದ ಮೂಲಕ ದೇಶದ ಉದ್ದಗಲಕ್ಕೂ ಮಧ್ವಮತದ ಸಿದ್ಧಾಂತವನ್ನು ಪಸರಿಸಿ ಸನಾತನ ಧರ್ಮವನ್ನು ಉಳಿಸಿದ ತಪೋನಿಷ್ಠರು. ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು, ಆರ್ಯ ಅಕ್ಷೋಭ್ಯ ಮಠದ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥರು ಆರಾಧನೆಯಲ್ಲಿ ಭಾಗವಹಿಸಿ ಸೌಹಾರ್ದತೆಯನ್ನು ಇಮ್ಮಡಿಗೊಳಿಸಿದ್ದಾರೆ ಎಂದರು.

ಮುಳಬಾಗಿಲು ಶ್ರೀಪಾದರಾಜರ ಮಠದ ಶ್ರೀ ಸುಜಯನಿಧಿ ತೀರ್ಥರು ಆಶೀರ್ವಚನ ನೀಡಿ; ಮಂತ್ರಾಲಯ ಶ್ರೀಗಳ ಅಂತಃಕರಣಭಾವ ನಮ್ಮನ್ನು ಸಂಪನ್ನರನ್ನಾಗಿಸಿದೆ. ಪದ್ಮನಾಭ ತೀರ್ಥರು ಸರ್ವ ಮಾಧ್ವ ಪರಂಪರೆಯ ಯತಿಗಳನ್ನು ಅನುಗ್ರಹಿಸಿದ ಮಹಾಮಹಿಮರಾಗಿದ್ದಾರೆ ಎಂದರು.

ಭಕ್ತವೃಂದ-ಹರ್ಷ: ಆನೆಗೊಂದಿಯ ನವವೃಂದಾವನ ಗಡ್ಡೆಯ ಪದ್ಮನಾಭತೀರ್ಥರು, ಕವೀಂದ್ರ ತೀರ್ಥರು, ವಾಗೀಶತೀರ್ಥರ ಆರಾಧನೆಗಳ ವ್ಯಾಜ್ಯಕ್ಕೆ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಮಠದ ಶ್ರೀಸುಬುಧೇಂದ್ರತೀರ್ಥರು, ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥರು ಒಂದಾಗಿ ಸೌಹಾರ್ದತೆಯ ಪರಿಹಾರಕ್ಕೆ ಮುಂದಾಗಿರುವುದು ಇಡೀ ಮಾಧ್ವ ಸಮಾಜದ ಭಕ್ತ ವೃಂದಕ್ಕೆ ಹರ್ಷವಾಗಿದೆ.

ನವವೃಂದಾವನ ಗಡ್ಡೆಯಲ್ಲಿರುವ ಪದ್ಮನಾಭತೀರ್ಥರು, ಕವೀಂದ್ರತೀರ್ಥರು, ವಾಗೀಶ ತೀರ್ಥರುಗಳ ಆರಾಧನೆ ವ್ಯಾಜ್ಯ ಉತ್ತರಾದಿ ಮಠ ಹಾಗೂ ರಾಯರ ಮಠಗಳ ನಡುವೆ 1959-60ರಿಂದಲೇ ಪ್ರಾರಂಭವಾಗಿ ಸವೋಚ್ಚ ನ್ಯಾಯಾಲಯವರೆಗೂ ಹೋಗಿತ್ತು. ನ್ಯಾಯಾಲಯವು ಉತ್ತರಾಧಿಮಠ ಹಾಗೂ ರಾಯರಮಠಕ್ಕೆ ಪದ್ಮನಾಭ ತೀರ್ಥರ, ಕವೀಂದ್ರ ತೀರ್ಥರ, ವಾಗೀಶ ತೀರ್ಥರ ಆರಾಧನೆಯನ್ನು ಒಂದೂವರೆ ದಿನದಂತೆ ಮಾಡಬೇಕು ಎಂದು ಈ ಹಿಂದೆ ತೀರ್ಪು ನೀಡಿದ್ದು ಉಭಯ ಮಠಗಳು ಸೇರಿ ಆರಾಧನೆ ಮಾಡಬೇಕೆಂಬುದು ಭಕ್ತರ ಮಹದಾಸೆಯಾಗಿತ್ತು.

ಈ ಹಿಂದೆ ಮಂತ್ರಾಲಯ ಮಠದ ಯತಿಧ್ವಯರಾದ ಸುಶಮೀಂದ್ರ ತೀರ್ಥರು, ಸುಯತೀಂದ್ರ ತೀರ್ಥರೊಂದಿಗೆ ಉತ್ತರಾದಿಮಠದ ಸತ್ಯಾತ್ಮತೀರ್ಥರು ಸಮಾಗಮವಾಗಿದ್ದನ್ನು ಮರೆಯುವಂತಿಲ್ಲ. ಸರ್ವೋಚ್ಛ ನ್ಯಾಯಾಲಯವು ಮಂತ್ರಾಲಯ ಮಠಾಧಿಶರಿಗೆ ಹಾಗೂ ಉತ್ತರಾದಿ ಮಠಾಧಿಶರಿಗೆ ಸೌಹಾರ್ದತೆಯ ಮೂಲಕ ಇತ್ಯರ್ಥಗೊಳಿಸಿಕೊಳ್ಳಿ ಎಂದು ಸಲಹೆ ನೀಡಿತ್ತು.

ನಿವೃತ್ತ ನ್ಯಾಯಾಧೀಶರ ಮಧ್ಯಸ್ಥಿಕೆಯಲ್ಲಿ ಚೆನೈ(ಮದ್ರಾಸ) ಹಾಗೂ ಬೆಂಗಳೂರಿನಲ್ಲಿ ಮಂತ್ರಾಲಯ ಮಠದ ಶ್ರೀ ಸುಬುಧೇಂದ್ರ ತೀರ್ಥರು, ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥರು ಸಮಾಗಮವಾಗಿದ್ದರು. ಸುಮಾರು 65 ವರ್ಷಗಳಿಂದ ನಡೆದ ವ್ಯಾಜ್ಯಕ್ಕೆ ಮಂತ್ರಾಲಯ ಮಠದ ಶ್ರೀಗಳು, ಉತ್ತರಾದಿ ಮಠದ ಶ್ರೀಗಳು ಸೌಹಾರ್ದತೆಯ ಮೂಲಕ ಆರಾಧನೆ ನಡೆಸಬೇಕು ಎಂಬ ನಿರ್ಧಾರ ನಿಜಕ್ಕೂ ಇತಿಹಾಸ ದಾಖಲೆ ಎಂದರೆ ಅತಿಶಯೋಕ್ತಿ ಆಗಲಾರದು. ಒಟ್ಟಾರೆ ಇನ್ನೂ ನವವೃಂದಾವನ ಗಡ್ಡೆಯಲ್ಲಿರುವ ವ್ಯಾಜ್ಯ ಆದಷ್ಟು ಬೇಗ ಸೌಹಾರ್ದತೆ, ಕಾನೂನು ಒಡಂಬಡಿಕೆ ಮೂಲಕ ಇತ್ಯರ್ಥವಾಗಲಿ ಎಂಬುದು ಭಕ್ತ ವೃಂದದ ಆಸೆಯಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version