Home ನಮ್ಮ ಜಿಲ್ಲೆ ಕೊಪ್ಪಳ ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ರಾಯರಡ್ಡಿ

ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ರಾಯರಡ್ಡಿ

0

ಯಲಬುರ್ಗಾ(ಕೊಪ್ಪಳ): ಸಿದ್ದರಾಮಯ್ಯನವರು ಚುನಾವಣೆಯಲ್ಲಿ ಸ್ಪರ್ಧಿಸಿ ಬಹುಮತದಿಂದ ಮುಖ್ಯಮಂತ್ರಿಯಾಗಿ ಆಯ್ಕೆ ಆಗಿದ್ದಾರೆ. ಒಂದು ಬಾರಿ ಆಯ್ಕೆ ಆದ ಮೇಲೆ 5 ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ ಎನ್ನುವುದು ನಮ್ಮ ಸ್ಪಷ್ಟ ಅಭಿಪ್ರಾಯ ಎಂದು ಸಿಎಂ ಆರ್ಥಿಕ ಸಲಹೆಗಾರ, ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ. ಲಕೋಟೆ ಇಟ್ಟು, ಇಲ್ಲಿಗೆ ಕಳುಹಿಸುವುದಿಲ್ಲ. ಸುಮ್ಮನೆ ಕೆಲವರು ತಪ್ಪು ಪ್ರಚಾರ ಮಾಡುತ್ತಾರೆ. ಶಾಸಕಾಂಗ ಪಕ್ಷ ಸಭೆ ಕರೆಯುತ್ತಾರೆ. ಯಾರು ಮುಖ್ಯಮಂತ್ರಿ ಆಗಬೇಕು ಎಂದು ನಿಮಗೇ ಬಿಟ್ಟಿದ್ದೇವೆಂದು ಹೈಕಮಾಂಡಿಗೆ ನಾವು ಹೇಳಬೇಕು. ಆಗ ಲಕೋಟೆ ಕಳುಹಿಸುತ್ತಾರೆ. ಸ್ಪರ್ಧೆ ಆಗಲಿ ಎಂದರೆ ಅವರೇನು(ಹೈಕಮಾಂಡ್) ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಎರಡೂವರೆ ವರ್ಷ ಅವಧಿ ಪ್ರಶ್ನೆ ಬರಲ್ಲ: ಎರಡೂವರೆ ವರ್ಷದ ಪ್ರಶ್ನೆಯೇ ಬರುವುದಿಲ್ಲ. ಈ ರೀತಿ ಆಗಲೂಬಾರದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಳ್ಳೆಯದಲ್ಲ ಎಂದು ಅಭಿಪ್ರಾಯಪಟ್ಟರು.

ಒಬ್ಬ ಮುಖ್ಯಮಂತ್ರಿಯನ್ನು ಸುಮ್ಮ ಸುಮ್ಮನೇ ತೆಗೆಯಲು ಆಗುವುದಿಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪ ಇರಬೇಕು. ಇಲ್ಲವೇ ಜನವಿರೋಧಿ ಕೆಲಸ ಮಾಡಿರಬೇಕು. ಡಿ.ಕೆ.ಶಿವಕುಮಾರ ನಮ್ಮ ಪಕ್ಷದ ರಾಜ್ಯಾಧ್ಯಕ್ಷರಿದ್ದು, ನಾನು ಮುಖ್ಯಮಂತ್ರಿ ಆಗುತ್ತೇನೆಂದು ಎಲ್ಲಿ ಹೇಳಿದ್ದಾರೆ? ಅವರು ಸಿಎಂ ಆಗಲೆಂದು ಬೆಂಬಲಿಗರು ಹೇಳುತ್ತಾರೆ. ನನಗೂ ಸಿಎಂ ಆಗಲಿ ಎನ್ನುತ್ತಾರೆ. ಬೇರೆಯವರಿಗೂ ಹೇಳುತ್ತಾರೆ. ಅವರವರ ಸಂಖ್ಯೆಗೆ ತಕ್ಕಂತೆ ಹೇಳುತ್ತಾರೆ. ಅದರ ಅರ್ಥ ಆಗೇಬಿಡುತ್ತಾರೆಂದು ಅಲ್ಲ. ಅನಾವಶ್ಯಕವಾಗಿ ಈ ಗೊಂದಲ ಮಾಧ್ಯಮದಲ್ಲಿದೆಯೇ ಹೊರತು, ನಮ್ಮ ಪಕ್ಷದಲ್ಲಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡೂವರೆ ವರ್ಷದ ಒಪ್ಪಂದದ ಬಗ್ಗೆ ನನ್ನ ಪ್ರಕಾರ ಚರ್ಚೆ ಆಗಿಲ್ಲ. ನಮಗೆ ಯಾರು ಹೇಳಿಲ್ಲ. ಕೇಳಿಲ್ಲ. ಕೇಳಿದ್ದರೆ ಶಿವಕುಮಾರ ಕುಳಿತು, ಮಾತನಾಡಲಿ. ಡಿ.ಕೆ.ಸುರೇಶಗೆ ಸಿದ್ದರಾಮಯ್ಯನವರು ಏನು ಮಾತು ಕೊಟ್ಟಿದ್ದಾರೆಂದು ನನಗೇನು ಗೊತ್ತಿಲ್ಲ ಎಂದರು.

ನಾನೇಕೆ ಸಿಎಂ ಆಗಬಾರದು?: ಸಿದ್ದರಾಮಯ್ಯ ಇಳಿಯುತ್ತಾರೆ ಎಂದ ಕೂಡಲೇ ಪರಮರೇಶ್ವರ್ ನಾನು ಸಿಎಂ ಎನ್ನುತ್ತಾರೆ. ಸತೀಶ ಜಾರಕಿಹೊಳಿ ನಾನು ಎನ್ನುತ್ತಾರೆ. ಎಲ್ಲರೂ ನಾವು ಎನ್ನುತ್ತಾರೆ. ಲಿಂಗಾಯತರ ಕೋಟಾದಡಿ ನಾನೇಕೆ ಆಗಬಾರದು? ನಾನು ಆಗಬಹುದಲ್ಲ, ಧೈರ್ಯವಾಗಿ ಹೇಳುತ್ತೇನೆ. ನಾನೇಕೆ ಆಗಬಾರದು? ಎಂದು ರಾಯರಡ್ಡಿ ಪ್ರಶ್ನಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version