ಕೊಪ್ಪಳ: ಶೀಲ ಶಂಕಿಸುತ್ತಿದ್ದ ಪತಿಯಿಂದ ವಿಚ್ಛೇದನ ಕೋರಿದ್ದ ಪತ್ನಿ, ಆಕೆಯ ತಂದೆ-ತಾಯಿಯ ಮೇಲೆ ನಗರದ ನ್ಯಾಯಾಲಯದ ಆವರಣದಲ್ಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿದ ಘಟನೆ ಬುಧವಾರ ನಡೆದಿದೆ.
ಪತಿ ಚಿರಂಜೀವಿ ಭೋವಿಯಿಂದ ದೂರವಾಗಲು ಬಯಸಿ ಪತ್ನಿ ರೋಜಾ ನಗರದ ಜಿಲ್ಲಾ ನ್ಯಾಯಾಲಯದ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯದ ಮಧ್ಯಸ್ಥಿಕೆ ಕೇಂದ್ರದಲ್ಲಿ ವಕೀಲರು ಬುಧವಾರ ಸಮಾಲೋಚನೆ ನಡೆಸುವಾಗ ಪತಿ ಚಿರಂಜೀವಿಯು, ಪತ್ನಿಯನ್ನು ತನ್ನಿಂದ ದೂರ ಮಾಡುತ್ತಿದ್ದಾರೆ ಎಂದು ಆಕ್ರೋಶಗೊಂಡು ರೋಜಾ, ಅತ್ತೆ ಶಾಂತಮ್ಮ ಮತ್ತು ಮಾವ ಶಂಕ್ರಪ್ಪ ಭೋವಿ ಮೇಲೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ.
ತಾಲೂಕಿನ ಹಳೆಕುಮಟಾ ಗ್ರಾಮದ ರೋಜಾ ಮತ್ತು ಕಾರಟಗಿ ತಾಲೂಕಿನ ಸಿದ್ದಾಪುರದ ಚಿರಂಜೀವಿ 12 ವರ್ಷಗಳ ಹಿಂದೆ ಪ್ರೀತಿಸಿ ಹಿರಿಯರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದುಡಿಯಲು ಇಬ್ಬರೂ ಬೆಂಗಳೂರಿಗೆ ಹೋಗಿದ್ದಾಗ ಪತಿ ಅನುಮಾನ ಪಡುವುದು, ಮದ್ಯ ಕುಡಿದು ಬಂದು ಹೊಡೆಯುವುದು ಮಾಡಿದ್ದಾನೆ. ಇದರಿಂದ ಅನೇಕ ಬಾರಿ ದಾಂಪತ್ಯ ಕಲಹಗಳು ನಡೆದಿವೆ.
ಎರಡು ತಿಂಗಳ ಹಿಂದೆ ಜಗಳ ಉಲ್ಬಣಿಸಿದ್ದಕ್ಕೆ ರೋಜಾ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇಬ್ಬರ ನಡುವೆಯೂ ಮಧ್ಯಸ್ಥಿಕೆ ನಡೆಯುತ್ತಿತ್ತು. ಆಗ ಪ್ಲಾಸ್ಟಿಕ್ ಬಾಟಲಿಯಲ್ಲಿ ಪೆಟ್ರೋಲ್ ತಂದಿದ್ದ ಚಿರಂಜೀವಿಯು ಪತ್ನಿ, ಅತ್ತೆ ಹಾಗೂ ಮಾವನ ಮೇಲೆ ಸುರಿದು, ಲೈಟರ್‌ನಿಂದ ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಆಗ ಅಲ್ಲಿಯೇ ಇದ್ದ ವಕೀಲರು ತಡೆದಿದ್ದಾರೆ.
ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
