ಹುಬ್ಬಳ್ಳಿ: ನೇಹಾ ಹಿರೇಮಠ ಹತ್ಯೆ ಆರೋಪಿ ಫಯಾಜ್ ಕೊಂಡುನಾಯ್ಕನ ಜಾಮೀನು ಅರ್ಜಿಯ ಬುಧವಾರ ವಿಚಾರಣೆ ನಡೆಸಿದ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜು. 23ಕ್ಕೆ ವಿಚಾರಣೆಯನ್ನು ಮುಂದೂಡಿದೆ.
ಮೃತ ನೇಹಾ ಹಿರೇಮಠ ಅವರ ತಾಯಿ ಗೀತಾ ನಿರಂಜನ ಹಿರೇಮಠ ಫಿರ್ಯಾದಿದಾರರು ಆಗಿದ್ದರು. ಸುಪ್ರೀಂಕೋರ್ಟ್ ಆದೇಶದ ಸೆಕ್ಷನ್‌ಗಳ ಪ್ರಕಾರ ಫಿರ್ಯಾದಿದಾರರ ಪರ ವಕಾಲತ್ತು ಮಾಡಲು ಅವಕಾಶವಿದೆ ಎಂದು ನೇಹಾ ಪರ ವಕೀಲ ರಾಘವೇಂದ್ರ ಮುತಗೀಕರ ಅರ್ಜಿ ಸಲ್ಲಿಸಿದ್ದರು. ಅಲ್ಲದೇ ವಕೀಲರಾದ ಗುರು ಹಿರೇಮಠ, ಅಶೋಕ ಅಣವೇಕರ ಅವರ ಸಲಹೆ ಸ್ವೀಕರಿಸಲು ಅವಕಾಶ ನೀಡುವಂತೆ ಕೋರಿದ್ದರು. ಇದಕ್ಕೆ ಫಯಾಜ್ ಪರ ವಕೀಲ ಝಡ್ ಎಂ. ಹಕ್ಕರಗಿ ತಕರಾರರು ಅರ್ಜಿ ಸಲ್ಲಿಸುವುದಾಗಿ ವಿವರಿಸಿದರು. ಆರೋಪಿ ಪರ ವಕೀಲರಿಗೆ ತಕರಾರು ಸಲ್ಲಿಸಲು ಅವಕಾಶ ಕಲ್ಪಿಸಿ ನ್ಯಾಯಾಲಯವು ವಿಚಾರಣೆಯನ್ನು 23ಕ್ಕೆ ಮುಂದೂಡಿದೆ.
ಕಾಲೇಜು ಆವರಣದಲ್ಲೇ ಕೊಲೆ: ಎಪ್ರಿಲ್ 18, 2024ರಂದು ಸಂಜೆ 4.30ರ ಸುಮಾರಿಗೆ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕ್ಯಾಂಪಸ್ ಆವರಣದಲ್ಲಿ ಕಾಲೇಜಿಗೆ ಬಂದಿದ್ದ ನೇಹಾ ಹಿರೇಮಠಳನ್ನು ಫಯಾಜ್ ಭೀಕರವಾಗಿ ಕೊಲೆ ಮಾಡಿದ್ದ.
ಪ್ರೀತಿ ನಿರಾಕರಿಸಿದ್ದಕ್ಕೆ ಕೋಪಗೊಂಡು ಯುವಕ, ಯುವತಿ ಕಾಲೇಜಿಗೆ ಬಂದಿರುವ ಸುಳಿವರಿತು ಕಾಲೇಜಿಗೆ ಆಗಮಿಸಿ, ಮರಳಿ ಮನೆಗೆ ತೆರಳುವ ವೇಳೆ ಕಾಲೇಜು ಆವರಣದಲ್ಲೆ ಚಾಕುವಿನಿಂದ ಸುಮಾರು 9 ಬಾರಿ ಇರಿದು ಕೊಲೆ ಮಾಡಿದ್ದ. ಕುತ್ತಿಗೆ ಭಾಗದಲ್ಲಿ ತೀವ್ರವಾಗಿ ಇರಿದಿರುವುದರಿಂದ ಯುವತಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಕೊನೆ ಉಸಿರು ಎಳೆದಿದ್ದಳು.