ಹುಬ್ಬಳ್ಳಿ: ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು ಎನ್ನುವ ಕೂಗು ಮೊದಲಿಂದಲೂ ಇದೆ. ದಲಿತ ಸಮುದಾಯ ಸಹ ಒತ್ತಾಯ ಮಾಡುತ್ತಿದೆ. ಹೀಗಾಗಿ ಡಾ. ಜಿ.ಪರಮೇಶ್ವರ ಸಿಎಂ ಆಗಬೇಕು ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಪರಮೇಶ್ವರ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ.
ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಡಾ. ಜಿ.ಪರಮೇಶ್ವರ ಪ್ರಭಾವಿ ನಾಯಕರು ಅವರು ಸಿಎಂ ಆಗುತ್ತೇನೆ ಎನ್ನುವುದರಲ್ಲಿ ತಪ್ಪೇನಿದೆ. ಪರಮೇಶ್ವರ ಅವರು ಹಿರಿಯರಿದ್ದಾರೆ. ಅವರು ಸಿಎಂ ಆಗಲಿ ಎನ್ನುವುದರಲ್ಲಿ ತಪ್ಪಿಲ್ಲ. ನಾನು ಕೂಡ ಸಚಿವ ಸ್ಥಾನದ ಆಕಾಂಕ್ಷಿ ಇದ್ದೇನೆ ಎಂದರು.
ಕಾಂಗ್ರೆಸ್‌ನಲ್ಲಿ ಯಾವುದೇ ಗೊಂದಲಗಳು ಇಲ್ಲ. ನಾವೆಲ್ಲರೂ ಒಂದೇ ಕುಟುಂಬದ ಸದಸ್ಯರಂತೆ ಇದ್ದೇವೆ. ಯಾವುದೇ ಭಿನ್ನಮತವಿಲ್ಲ ಎಂದರು.
ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ: ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸ ಇಲ್ಲದೇ ಇರುವುದರಿಂದ ಬೇಕಾಬಿಟ್ಟಿ ಮಾತನಾಡುತ್ತಿದ್ದಾರೆ. ಗ್ಯಾರಂಟಿ ಸೇರಿದಂತೆ ಎಲ್ಲವನ್ನು ಬಿಜೆಪಿಯವರು ಟೀಕೆ ಮಾಡಿದ್ದಾರೆ. ಆದರೆ, ನಾವು ಯಶಸ್ವಿಯಾಗಿ ಜನರಿಗೆ ಗ್ಯಾರಂಟಿ ಯೋಜನೆ ಕೊಡುತ್ತಿದ್ದೇವೆ. ಅವರು ತಮ್ಮ ಅವಧಿಯಲ್ಲಿ ಏನು ಕೆಲಸ ಮಾಡಿದ್ದಾರೆ ಹೇಳಲಿ ಎಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ವಾಗ್ದಾಳಿ ನಡೆಸಿದರು. ಬಿಜೆಪಿಯವರು ಕಾಂಗ್ರೆಸ್‌ನ ಆಂತರಿಕ ವಿಷಯಗಳ ಬಗ್ಗೆ ಮಾತನಾಡುವ ಮೂಲಕ ತನ್ನ ಬೇಜವಾಬ್ದಾರಿತನವನ್ನು ಪ್ರದರ್ಶಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
