ಧಾರವಾಡ: ಹೈದರಾಬಾದ್‌ನಲ್ಲಿ ಮಾಜಿ ಕೇಂದ್ರ ಸಚಿವರ ಪುತ್ರನಿಗೆ ಸುಮಾರು 23 ಕೋಟಿ ರೂ. ವಂಚನೆ ಮಾಡಿ ಪರಾರಿಯಾಗಿದ್ದ ಇಬ್ಬರು ವಂಚಕರನ್ನು ಧಾರವಾಡ ಜಿಲ್ಲಾ ಪೊಲೀಸರು ಹು-ಧಾ ಬೈಪಾಸ್‌ನಲ್ಲಿ ಬಂಧಿಸಿ ಹೈದರಾಬಾದ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಹೈದರಾಬಾದ್ ಮೂಲದ ಸತೀಶ ಉಪ್ಪಾಲಪಟ್ಟಿ ಹಾಗೂ ಶಿಲ್ಪಾ ಬಂಡಾ ಬಂಧಿತ ದಂಪತಿ. ಬಂಧಿತರು ಕೇಂದ್ರದ ಮಾಜಿ ಸಚಿವ ಪಿ. ಶಿವಶಂಕರ್ ಅವರ ಪುತ್ರ ಪಿ. ವಿನಯಕುಮಾರ್ ಅವರಿಗೆ ಹಣ ಡಬಲ್ ಕೊಡುವುದಾಗಿ ಹೇಳಿ ಸುಮಾರು 23 ಕೋಟಿ ಪಡೆದು ವಂಚಿಸಿದ್ದರು ಎಂದು ದೂರಲಾಗಿದೆ. ಇದಲ್ಲದೇ ಇನ್ನೂ ಹಲವು ವಂಚನೆ ಪ್ರಕರಣಗಳು ಇವರ ವಿರುದ್ಧ ದಾಖಲಾಗಿದ್ದವು.
ಸೆ. 18ರಂದು ಈ ಕುರಿತು ಸೆಂಟ್ರಲ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದಾದ ಬಳಿಕ ಆರೋಪಿತ ರನ್ನು ಬಂಧಿಸಲಾಗಿತ್ತು. ಆದರೆ ಸ್ಥಳೀಯ ಪೊಲೀಸರೊಬ್ಬರ ಸಹಾಯದಿಂದ ಇವರು ತಪ್ಪಿಸಿಕೊಂಡಿದ್ದರು. ಇವರ ಪತ್ತೆಗಾಗಿ ಹೈದರಾಬಾದ್ ಪೊಲೀಸರು ಬಲೆ ಬೀಸಿದ್ದರೂ ಅದು ಫಲಕಾರಿಯಾಗಿರಲಿಲ್ಲ. ಬೇರೆ ಬೇರೆ ರಾಜ್ಯಗಳಲ್ಲಿ ಆರೋಪಿಗಳು ತಲೆಮರೆಸಿಕೊಂಡು ಸುತ್ತಾಡುತ್ತಿದ್ದರು ಎನ್ನಲಾಗಿದೆ.
ಕಳೆದ ದಿ. 20ರಂದು ಎಸ್‌ಪಿ ಗುಂಜನ್ ಆರ್ಯ ನೇತೃತ್ವದಲ್ಲಿ ಹೆದ್ದಾರಿ ಕಾವಲು ಪೊಲೀಸರು ಖಚಿತ ಮಾಹಿತಿ ಆಧರಿಸಿ ಇಲ್ಲಿಯ ನರೇಂದ್ರ ಬೈಪಾಸ್ ಬಳಿ ಆರೋಪಿಗಳು ಸಂಚರಿಸುತ್ತಿದ್ದ ವಾಹನವನ್ನು ತಪಾಸಣೆ ನಡೆಸಿ ಬಂಧಿಸಿದರು. ಬಳಿಕ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರುಪಡಿಸಿ ಹೈದರಾಬಾದ್ ಸೆಂಟ್ರಲ್ ಕ್ರೈಂ ಸ್ಟೇಷನ್ ಪೊಲೀಸರ ಸುಪರ್ದಿಗೆ ಒಪ್ಪಿಸಿದ್ದಾರೆ.
