ಧಾರವಾಡ : ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಧಾರವಾಡ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧವನ್ನು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠ ಇಂದು ರದ್ದುಗೊಳಿಸಿದೆ. ಇದರಿಂದಾಗಿ ಇದೀಗ ಸ್ವಾಮೀಜಿಗಳು ಧಾರವಾಡ ಜಿಲ್ಲೆಯಲ್ಲಿ ಸಾಮಾನ್ಯವಾಗಿ ಸಂಚರಿಸುವುದು, ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದು ಮತ್ತು ಭಕ್ತರನ್ನು ಭೇಟಿಯಾಗಲು ಯಾವುದೇ ಕಾನೂನು ಅಡ್ಡಿಯಿಲ್ಲ ಎಂಬುದು ಸ್ಪಷ್ಟವಾಗಿದೆ.
ಈಗಾಗಲೇ ಜಿಲ್ಲಾಧಿಕಾರಿ ಕಚೇರಿಯ ಶಿಫಾರಸ್ಸಿನ ಮೇರೆಗೆ ಕಾನೂನುಸುವ್ಯವಸ್ಥೆ ನಿಟ್ಟಿನಲ್ಲಿ ಕೆಲಕಾಲದ ಹಿಂದೆ ಸ್ವಾಮೀಜಿಗಳ ಮೇಲೆ ಜಿಲ್ಲೆಯೊಳಗಿನ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಭಕ್ತರು ಮತ್ತು ಮಠದ ಆಡಳಿತ ಸಮಿತಿ ನ್ಯಾಯಾಲಯದ ಮೊರೆ ಹೋಗಿದ್ದವು.
ವಿವಾದದ ವಿಚಾರಣೆ ವಿಚಾರಣೆ ವೇಳೆ, ಮಠದ ಪರ ವಕೀಲರು ನಿರ್ಬಂಧ ಆದೇಶಕ್ಕೆ ಸೂಕ್ತ ಕಾನೂನು ಆಧಾರವಿಲ್ಲದೆ ತುರ್ತು ಕ್ರಮವಾಗಿ ಜಾರಿಗೊಳಿಸಲಾಯಿತು ಎಂದು ವಾದಿಸಿದರು. ಮತ್ತೊಂದೆಡೆ ಸರ್ಕಾರದ ಪರ ವಕೀಲರು ಕಾನೂನು-ಸುವ್ಯವಸ್ಥೆಗೆ ಅಪಾಯ ಉಂಟಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂದು ಸ್ಪಷ್ಟಪಡಿಸಿದರು.
ಎರಡೂ ಪಕ್ಷಗಳ ದಾಖಲೆಗಳು, ವಾದ—ಪ್ರತಿವಾದಗಳನ್ನು ಪರಿಶೀಲಿಸಿದ ಬಳಿಕ ಮಾನ್ಯ ನ್ಯಾಯಾಲಯ, ಅಧಿಕಾರಿಗಳ ಆಕ್ಷೇಪಣೆಗಳಿಗೆ ಪರ್ಯಾಯ ಆಧಾರಗಳಿಲ್ಲ ಎಂದು ತೀರ್ಮಾನಿಸಿ ನಿರ್ಬಂಧ ಆದೇಶವನ್ನು ತೆರವುಗೊಳಿಸಿದೆ.
ಈ ತೀರ್ಪಿನ ಹಿನ್ನೆಲೆ, ಭಕ್ತರಲ್ಲಿ ಹರ್ಷದ ವಾತಾವರಣ ನಿರ್ಮಾಣಗೊಂಡಿದ್ದು, ಹಲವು ಕಡೆ ಪಟಾಕಿ ಸಿಡಿಸಿ ಸಂಭ್ರಮ ವ್ಯಕ್ತಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಮಠದ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳನ್ನು ಹೆಚ್ಚಿನ ಶಾಂತಿ ಮತ್ತು ಸುವ್ಯವಸ್ಥೆಯೊಂದಿಗೆ ಮುಂದುವರಿಸಲು ಅಧಿಕಾರಿಗಳು ಮತ್ತು ಮಠದವರು ಸಹಕಾರ ನೀಡಬೇಕೆಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
