ಧಾರವಾಡ: ಕೃಷಿ ವಿಶ್ವವಿದ್ಯಾಲಯ ಆಯೋಜಿಸಿದ 4 ದಿನಗಳ ಕೃಷಿ ಮೇಳ ಶನಿವಾರ ಸೆ. 13ರಿಂದ ಆರಂಭಗೊಳ್ಳಲಿದೆ.
ಸೆ. 13ರಿಂದ ಸೆ. 16ರವರೆಗೆ ನಡೆಯುವ ಕೃಷಿ ಮೇಳ “ಪೌಷ್ಟಿಕ ಆಹಾರ ಭದ್ರತೆಗೆ ಮಣ್ಣಿನ ಆರೋಗ್ಯ ಮತ್ತು ಸಾಂಪ್ರದಾಯಿಕ ತಳಿಗಳು’ ಧ್ಯೇಯ ಹೊಂದಿದೆ. ಫಲ-ಪುಷ್ಪ ಪ್ರದರ್ಶನ, ಬೀಜ ಮೇಳ, ಶ್ರೇಷ್ಠ ಕೃಷಿಕ ಹಾಗೂ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪ್ರದಾನ ಹಾಗೂ ಕೃಷಿ ವಿಜ್ಞಾನಿಗಳಿಂದ ವಿವಿಧ ಉಪನ್ಯಾಸ ಆಯೋಜಿಸಲಾಗುತ್ತಿದೆ.
ಸೆ. 15ರಂದು ಬೆಳಗ್ಗೆ 11:30ಕ್ಕೆ ಸಿಎಂ ಸಿದ್ದರಾಮಯ್ಯ ಕೃಷಿ ಮೇಳಕ್ಕೆ ಚಾಲನೆ ನೀಡಲಿದ್ದು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಸೇರಿದಂತೆ ಗಣ್ಯರು ಉದ್ಘಾಟನಾ ಸಮಾರಂಭದ ಭಾಗವಾಗಲಿದ್ದಾರೆ.
ಕೃಷಿಯಲ್ಲಿ ಕೃತಕ ಬುದ್ಧಿಮತ್ತೆ ಕುರಿತು ಉಪನ್ಯಾಸ ಆಯೋಜಿಸುತ್ತಿರುವುದು ವಿಶೇಷ. ಸಾಧಕ ಕೃಷಿಕರು ತಮ್ಮ ಯಶೋಗಾಥೆ ಹಂಚಿಕೊಳ್ಳಲಿದ್ದಾರೆ. ವಿಚಾರ ವಿನಿಮಯ ಗೋಷ್ಠಿಗಳಲ್ಲಿ ಕೃಷಿ ವಿಜ್ಞಾನಿಗಳು ರೈತರ ಸಂದೇಹಗಳನ್ನು ಬಗೆಹರಿಸಲಿದ್ದಾರೆ.
ನೂರಾರು ಕೃಷಿ ಹಾಗೂ ವಾಣಿಜ್ಯ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಮೇಳದಲ್ಲಿ ಪ್ರದರ್ಶಿಸುತ್ತಿದ್ದು, ವರ್ಷದಿಂದ ವರ್ಷಕ್ಕೆ ಧಾರವಾಡ ಕೃಷಿ ಮೇಳಕ್ಕೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅತೀವೃಷ್ಟಿ ಪರಿಣಾಮಕ್ಕೆ ತತ್ತರಿಸಿದ್ದರೂ ಕೃಷಿ ಮೇಳಕ್ಕೆ ರೈತರು ಬಂದೇ ಬರುತ್ತಾರೆ.
ಕೃಷಿ ಮಾಹಿತಿ ಕಣಜ, ತಜ್ಞರ ಮಾರ್ಗದರ್ಶನ, ಉತ್ಪನ್ನಗಳ ಪರಿಚಯ ಮಾಡಿಕೊಳ್ಳಲು ಬರುತ್ತಾರೆ ಎಂಬ ನಿರೀಕ್ಷೆ ವಿವಿಯದ್ದಾಗಿದೆ. ಆದರೆ, ಏಕಾಏಕಿ ಶುಕ್ರವಾರ ಮಧ್ಯಾಹ್ನ ಮಳೆ ಸುರಿದಿದ್ದು, ಮಳೆ ಮುಂದುವರೆದರೆ ಮೇಳದ ಮೆರಗು ಕುಂದಲಿದೆ ಎಂಬ ಆತಂಕ ಶುರುವಾಗಿದೆ.