ಮೈಸೂರು: ಸಾಮಾಜಿಕ ನ್ಯಾಯದ ಹರಿಕಾರ, ಹಿಂದುಳಿದ ವರ್ಗಗಳ ಧ್ವನಿಯಾಗಿ ಗುರುತಿಸಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸರ ಪ್ರತಿಮೆ ಮೈಸೂರಿನಲ್ಲಿ ಅನಾವರಣವಾಗದೆ ಅನಾಥ ಸ್ಥಿತಿಯಲ್ಲಿ ನಿಂತಿದೆ ಎಂಬ ಕಾರಣದಿಂದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಮಾಡಿದ್ದು, “ಕರ್ನಾಟಕ ರಾಜ್ಯದ ಆಡಳಿತದಲ್ಲಿ ಸಾಮಾಜಿಕ ಹಾಗೂ ಆಡಳಿತ ಸುಧಾರಣೆಗಳಿಗೆ ಹಲವು ಮಹತ್ವದ ಯೋಜನೆಗಳನ್ನು ರೂಪಿಸಿ ಧೀಮಂತ ಮುಖ್ಯಮಂತ್ರಿಯಾಗಿ ಹೆಸರು ಪಡೆದಿದ್ದ ಡಿ. ದೇವರಾಜ ಅರಸರು ಮೈಸೂರು ಜಿಲ್ಲೆಯವರೇ ಆಗಿದ್ದಾರೆ. ಆದರೆ ದಶಕಗಳಿಂದ ಕಾಂಗ್ರೆಸ್ ಪಕ್ಷ ಮೈಸೂರು ಜಿಲ್ಲೆಯಲ್ಲಿ ಅವರನ್ನು ಸ್ಮರಿಸುವ ಯಾವ ಕಾರ್ಯಕ್ರಮವನ್ನೂ ಆಯೋಜಿಸಿಲ್ಲ,” ಎಂದು ಹೇಳಿದ್ದಾರೆ.
ಅವರು ಮುಂದುವರಿದು, “ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಆಡಳಿತದ ವೇಳೆ ದೇವರಾಜ ಅರಸರ ಸ್ಮರಣಾರ್ಥ ₹92 ಲಕ್ಷ ರೂಗಳನ್ನು ಮಂಜೂರು ಮಾಡಿ ಮೈಸೂರಿನ ನೂತನ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗದಲ್ಲಿ ಪ್ರತಿಮೆ ಸ್ಥಾಪಿಸಲು ಆದೇಶಿಸಲಾಗಿತ್ತು. ಪ್ರತಿಮೆ ಸಿದ್ದವಾಗಿದ್ದರೂ ಅದನ್ನು ಅನಾವರಣಗೊಳಿಸಲು ಜಿಲ್ಲಾಡಳಿತ ಮುಂದೆ ಬರದಿರುವುದು ಖಂಡನೀಯ,” ಎಂದಿದ್ದಾರೆ.
ವಿಜಯೇಂದ್ರ ಮತ್ತಷ್ಟು ಆರೋಪಿಸಿ, “ಮೈಸೂರು ರಾಜ್ಯವನ್ನು ‘ಕರ್ನಾಟಕ’ ಎಂದು ನಾಮಕರಣ ಮಾಡುವ ಮೂಲಕ ನವೆಂಬರ್ 1ರಂದು ನಾವು ಆಚರಿಸುವ ಕನ್ನಡ ರಾಜ್ಯೋತ್ಸವಕ್ಕೆ ಕಾರಣರಾದವರೇ ದೇವರಾಜ ಅರಸರು. ಆದ್ದರಿಂದ ಇದೇ ನವೆಂಬರ್ 1ರಂದು ಪ್ರತಿಮೆಯ ಅನಾವರಣದ ಮೂಲಕ ರಾಜ್ಯೋತ್ಸವವನ್ನು ಅರ್ಥಪೂರ್ಣಗೊಳಿಸಬೇಕು. ಇಲ್ಲದಿದ್ದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದವರ ದನಿಯಾದ ದೇವರಾಜ ಅರಸರ ಬಗ್ಗೆ ತಾತ್ಸಾರ ಧೋರಣೆ ತೋರಿದೆ ಎಂಬ ನಿರ್ಣಯಕ್ಕೆ ಜನ ಬರುವರು,” ಎಂದು ಎಚ್ಚರಿಕೆ ನೀಡಿದ್ದಾರೆ.
