ಮೈಸೂರು: ಪಿರಿಯಾಪಟ್ಟಣದಲ್ಲಿ ನಡೆದ ಗ್ಯಾಸ್ ಗೀಸರ್ ಸೋರಿಕೆಯ ದುರಂತ ಘಟನೆಯಲ್ಲಿ ಇಬ್ಬರು ಯುವತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಮೃತಪಟ್ಟವರನ್ನು ಗುಲ್ಫಾರ್ಮ್ (23) ಮತ್ತು ಸಿಮ್ರಾನ್ ತಾಜ್ (20) ಎಂದು ಗುರುತಿಸಲಾಗಿದೆ. ಈ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದ್ದು, ಸ್ಥಳೀಯರಲ್ಲಿ ಆಘಾತ ಮೂಡಿಸಿದೆ.
ಮೂಲಗಳ ಪ್ರಕಾರ, ಇಬ್ಬರು ಯುವತಿಯರು ತಮ್ಮ ಮನೆಯಲ್ಲಿ ಸ್ನಾನ ಮಾಡಲು ಬಾತ್‌ರೂಮ್‌ಗೆ ತೆರಳಿದ್ದರು. ಆದರೆ ಬಹಳ ಹೊತ್ತಾದರೂ ಹೊರಬಂದಿರಲಿಲ್ಲ. ಅವರ ತಂದೆ ಅಲ್ತಾಫ್ ಅಹಮ್ಮದ್ ಶಂಕೆಗೊಂಡು ಬಾತ್‌ರೂಮ್ ಬಾಗಿಲು ಒಡೆದಾಗ ಇಬ್ಬರೂ ಅರೆಪ್ರಜ್ಞಾವಸ್ಥೆಯಲ್ಲಿ ಬಿದ್ದಿರುವುದು ಕಂಡುಬಂದಿತು. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಮಾರ್ಗಮಧ್ಯೆ ಇಬ್ಬರೂ ಮೃತಪಟ್ಟಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮಾನೋಆಕ್ಸೈಡ್ ವಿಷಕಾರಿ ಅನಿಲ ಸೋರಿಕೆಯಾಗಿ ಉಸಿರುಗಟ್ಟಿದ ಪರಿಣಾಮ ಸಾವು ಸಂಭವಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ತಾಂತ್ರಿಕ ತಜ್ಞರನ್ನು ಕರೆಸಿ ಗೀಸರ್‌ನ ಸ್ಥಿತಿ ಪರಿಶೀಲನೆ ಮಾಡುತ್ತಿದ್ದಾರೆ.
ಗ್ಯಾಸ್ ಗೀಸರ್ ಬಳಸುವಾಗ ವಾಯು ಸಂಚಾರ ಇರದೆ ಇದ್ದರೆ ಆಮ್ಲಜನಕದ ಕೊರತೆಯಿಂದ ಕಾರ್ಬನ್ ಮಾನೋಆಕ್ಸೈಡ್ ವಿಷಕಾರಿ ಅನಿಲ ಉಂಟಾಗಿ ಜೀವಾಪಾಯ ಸಂಭವಿಸಬಹುದು ಎಂಬ ಎಚ್ಚರಿಕೆ ಅಧಿಕಾರಿಗಳಿಂದ ನೀಡಲಾಗಿದೆ.
ಈ ಘಟನೆಯು ಮತ್ತೊಮ್ಮೆ “ಗ್ಯಾಸ್ ಗೀಸರ್‌ಗಳನ್ನು ಸುರಕ್ಷಿತವಾಗಿ ಬಳಸುವ ಅಗತ್ಯ”ವನ್ನು ಎಲ್ಲರಿಗೂ ನೆನಪಿಸಿದೆ.
