Home ನಮ್ಮ ಜಿಲ್ಲೆ ಮೈಸೂರು ಗಂಡನನ್ನೇ ಕೊಲೆ ಮಾಡಲು ಸ್ಕೆಚ್​ ಹಾಕಿದಾಕೆ ಸಹೋದರರ ಸಮೇತ ಅಂದರ್‌

ಗಂಡನನ್ನೇ ಕೊಲೆ ಮಾಡಲು ಸ್ಕೆಚ್​ ಹಾಕಿದಾಕೆ ಸಹೋದರರ ಸಮೇತ ಅಂದರ್‌

0

ನಂಜನಗೂಡು (ಮೈಸೂರು): ಪತಿಯನ್ನ ಮುಗಿಸಲು ಪತ್ನಿಯೇ ಸ್ಕೆಚ್ ಹಾಕಿ ಸಿಕ್ಕಿಬಿದ್ದ ಘಟನೆ ನಂಜನಗೂಡಿನಲ್ಲಿ ನಡೆದಿದೆ. ನಂಜನಗೂಡು ಪೊಲೀಸರ ಸಮಯೋಚಿತ ಕಾರ್ಯಾಚರಣೆಯಿಂದ ಕಿಲಾಡಿ ಪತ್ನಿ ಅಂದರ್ ಆಗಿದ್ದಾಳೆ. ಪತಿಯನ್ನ ಮುಗಿಸಲು ಸಹೋದರನ ನೆರವನ್ನು ಪಡೆದು ದರೋಡೆ ಸನ್ನಿವೇಶ ಸೃಷ್ಟಿಸಿ ತಪ್ಪಿಸಿಕೊಳ್ಳುವ ಹುನ್ನಾರ ನಡೆಸಿದ ಪತ್ನಿ ಪೊಲೀಸರು ಹೆಣೆದ ಬಲೆಗೆ ಸಿಲುಕಿದ್ದಾಳೆ.

ಸಹೋದರ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಸೇರಿದಂತೆ ನಾಲ್ವರನ್ನ ಪೊಲೀಸರು ಬಂಧಿಸಿ ಕಂಬಿ ಎಣಿಸಲು ಕಳಿಸಿದ್ದಾರೆ. ಕಂಪ್ಯೂಟರ್ ಆಪರೇಟರ್ ಆಗಿರುವ ಪತ್ನಿ ಸಂಗೀತಾ ಈಕೆ ಸಹೋದರ ಸಂಜಯ್ ಈತನ ಸ್ನೇಹಿತ ವಿಘ್ನೇಶ್ ಹಾಗೂ ಸಂಘರ್ಷಕ್ಕೆ ಒಳಗಾದ ಬಾಲಕ ಇದೀಗ ಪೊಲೀಸರ ಅತಿಥಿ. ಡ್ರಾಗರ್‌ನಿಂದ ಇರಿದು ಹತ್ಯೆಯ ಸಂಚಿಗೆ ಸಿಲುಕಿ ಗಾಯಗೊಂಡ ರಾಜೇಂದ್ರ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಫೈಬರ್ ಡೋರ್‌ಗಳನ್ನ ಫಿಟ್ ಮಾಡುವ ವೃತ್ತಿ ನಡೆಸುವ ರಾಜೇಂದ್ರರವರನ್ನ ಹತ್ಯೆ ಮಾಡಲು ಯತ್ನಿಸಿದ ಪತ್ನಿಯ ಸಂಚನ್ನ ಬಯಲು ಮಾಡುವಲ್ಲಿ ನಂಜನಗೂಡು ಪೊಲೀಸರು ಸಕ್ಸಸ್ ಆಗಿದ್ದಾರೆ. ರಾಜೇಂದ್ರ ಹಾಗೂ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯವಿದೆ. ಕೌಟುಂಬಿಕ ಕಲಹದ ಹಿನ್ನಲೆ ಇಬ್ಬರ ನಡುವೆ ಸಾಮರಸ್ಯ ಇಲ್ಲವೆಂದು ಹೇಳಲಾಗಿದೆ.

ಅಕ್ಟೋಬರ್ 25 ರಂದು ರಾಜೇಂದ್ರರವರು ಪತ್ನಿ ಸಂಗೀತಾಳನ್ನ ತಮ್ಮ ಸ್ಕೂಟರ್‌ನಲ್ಲಿ ನಂಜನಗೂಡಿನ ಹುಂಡುವಿನಹಳ್ಳಿ ಬಡಾವಣೆಯ ಮುಡಾ ಲೇಔಟ್ ಬಳಿ ತೆರಳುತ್ತಿದ್ದ ಸಮಯದಲ್ಲಿ ಮುಂದೆ ಸಾಗುತ್ತಿದ್ದ ಬಿಳಿ ಬಣ್ಣದ ಕಾರು ಅಡ್ಡವಾಗಿ ನಿಂತಿದೆ. ಕಾರಿನಲ್ಲಿದ್ದ ವ್ಯಕ್ತಿ ಹತ್ತಿರ ಬಂದು ಸ್ಕೂಟರ್ ಬೀಳಿಸಿದ್ದಾನೆ. ರಾಜೇಂದ್ರ ಹಾಗೂ ಸಂಗೀತಾ ಕೆಳಗೆ ಬಿದ್ದಿದ್ದಾರೆ.

ಈ ವೇಳೆ ವ್ಯಕ್ತಿ ರಾಜೇಂದ್ರ ಜೊತೆ ಜಗಳ ಮಾಡಿದ್ದಾನೆ. ಇದೇ ವೇಳೆ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸಂಗೀತಾ ಬಳಿ ಬಂದು ಕುತ್ತಿಗೆಯಲ್ಲಿದ್ದ ಚೈನ್ ಕಸಿಯಲು ಯತ್ನಿಸಿದ್ದಾರೆ. ಈ ವೇಳೆ ವ್ಯಕ್ತಿ ಹರಿತವಾದ ಆಯುಧದಿಂದ ರಾಜೇಂದ್ರ ಅವರಿಗೆ ತಿವಿದಿದ್ದಾನೆ. ಈ ಸಂಧರ್ಭದಲ್ಲಿ ಒಂದು ವಾಹನ ಬಂದಾಗ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ರಾಜೇಂದ್ರ ಆಸ್ಪತ್ರೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಅಲರ್ಟ್ ಆದ ನಂಜನಗೂಡು ಪೊಲೀಸರು ಎಸ್ಪಿ ವಿಷ್ಣುವರ್ಧನ್,ಅಡಿಷನಲ್ ಎಸ್ಪಿ ಮಲ್ಲಿಕ್ ಹಾಗೂ ನಾಗೇಶ್,ಡಿವೈಎಸ್ಪಿ ರಘುರವರ ಮಾರ್ಗದರ್ಶನದಲ್ಲಿ ಹಾಗೂ ಇನ್ಸ್ಪೆಕ್ಟರ್ ರವೀಂದ್ರ, ಪಿಎಸ್ಸೈಗಳಾದ ಕೃಷ್ಣಕಾಂತ ಕೋಳಿಮಂಜುನಾಥ್ ಎಎಸ್ಸೈ ದೇವರಾಜಯ್ಯ ನೇತೃತ್ವದಲ್ಲಿ ಸಿಬ್ಬಂದಿಗಳಾದ ಕೃಷ್ಣ, ಶಿವಕುಮಾರ್, ತಿಮ್ಮಯ್ಯ, ಮಹೇಶ್, ಚೇತನ್, ನವೀನ್ ಕುಮಾರ್, ಪೀರಪ್ಪ ಹಾದಿಮನಿ, ರವಿಕುಮಾರ್, ಮಹಿಳಾ ಸಿಬ್ಬಂದಿಗಳಾದ ಸರಿತಾ, ಸಹನ ಹಾಗೂ ಚಾಲಕ ಕೃಷ್ಣ ಅವರನ್ನೊಳಗೊಂಡ ತಂಡ ರಚಿಸಲಾಗಿದೆ. ಘಟನೆ ನಡೆದ ಸ್ಥಳ, ಸಿಸಿ ಕ್ಯಾಮರಾ ನೆರವು ಹಾಗೂ ವೈಜ್ಞಾನಿಕ ಅಂಶಗಳ ನೆರವಿನಿಂದ ತೆನಿಖೆ ಆರಂಭಿಸಿದಾಗ ಪತ್ನಿ ಸಂಗೀತಾ ಸ್ಕೆಚ್ ಬಯಲಾಗಿದೆ.

ದಂಪತಿ ನಡುವೆ ಇರುವ ಭಿನ್ನಾಭಿಪ್ರಾಯದಿಂದ ಪತಿಯನ್ನೇ ಮುಗಿಸಲು ಪತ್ನಿ ಸಂಗೀತಾ ಸ್ಕೆಚ್ ಹಾಕಿದ್ದಾಳೆ. ಇದಕ್ಕೆ ತನ್ನ ಸಹೋದರನನ್ನೇ ಬಳಸಿಕೊಂಡಿದ್ದಾಳೆ. ಕಾರನ್ನ ಬಾಡಿಗೆ ಪಡೆದ ಸಹೋದರ ಸಂಜಯ್ ಸ್ನೇಹಿತ ವಿಘ್ನೇಶ್ ಹಾಗೂ ಅಪ್ರಾಪ್ತ ಬಾಲಕನ ನೆರವಿನಿಂದ ಹತ್ಯೆಗೆ ಸಂಚು ರೂಪಿಸಿದ್ದಾರೆ.ಸಂಜೆ 7.30 ರ ಸಮಯದಲ್ಲಿ ದಂಪತಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪರಿಚಿತರಂತೆ ಅಟ್ಯಾಕ್ ಮಾಡಿದ್ದಾರೆ.

ಸಂಗೀತಾ ಸಹ ಸಾಕಷ್ಟು ನಟಿಸಿದ್ದಾಳೆ. ಡ್ರಾಗರ್‌ನಿಂದ ಚುಚ್ಚಿ ರಾಜೇಂದ್ರರನ್ನ ಮುಗಿಸುವ ಸ್ಕೆಚ್ ನಡೆದಿದೆ. ಅಷ್ಟರಲ್ಲಿ ವಾಹನವೊಂದು ಬಂದ ಪರಿಣಾಮ ಹತ್ಯೆ ಸ್ಕೆಚ್ ಮಿಸ್ ಆಗಿದೆ. ಸಂಗೀತಾಳನ್ನ ತೀವ್ರವಾಗಿ ವಿಚಾರಣೆಗೆ ಒಳಪಡಿಸಿದಾಗ ಹತ್ಯೆ ಸಂಚು ಬಯಲಾಗಿದೆ. ಪತಿಯನ್ನೇ ಮುಗಿಸಲು ಯತ್ನಿಸಿದ ಐನಾತಿ ಪತ್ನಿ ಸಂಗೀತಾ ತನ್ನ ಸಹೋದರನ ಜೊತೆ ಕಂಬಿ ಎಣಿಸುತ್ತಿದ್ದಾಳೆ.

ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ದರೋಡೆ ಸನ್ನಿವೇಶ ಸೃಷ್ಟಿಸಿ ಪತಿಯನ್ನ ಹತ್ಯೆ ಮಾಡಲು ಯತ್ನಿಸಿದ ಪತ್ನಿಯ ಸಂಚು ಭೇದಿಸಿದ ನಂಜನಗೂಡು ಪೊಲೀಸರ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತವಾಗಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version