ಮೈಸೂರು: ರಾಜ್ಯದ ಕೈಗಾರಿಕಾ ವಲಯದಲ್ಲಿ ಹೊಸ ಹೂಡಿಕೆ ಮತ್ತು ಉದ್ಯೋಗಾವಕಾಶಗಳ ಸೃಷ್ಟಿಗೆ ಮತ್ತೊಂದು ಮಹತ್ವದ ಹೆಜ್ಜೆ ಇಡಲಾಗಿದೆ. ಮೈಸೂರು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಕೇನ್ಸ್ ಟೆಕ್ನಾಲಜೀಸ್ ಮತ್ತು ಸೈಯಂಟ್ ಡಿ.ಎಲ್.ಎಂ ಕಂಪನಿಗಳಿಗೆ ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ನಿನ್ನೆ ಭೇಟಿನೀಡಿದರು.
ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನೆಗೆ ಖ್ಯಾತಿ ಪಡೆದಿರುವ ಕೇನ್ಸ್ ಟೆಕ್ನಾಲಜೀಸ್ ಕಂಪನಿಯು ಚಾಮರಾಜನಗರ ಘಟಕವನ್ನು ವಿಸ್ತರಿಸಲು ಸರ್ಕಾರದ ಮುಂದೆ ಮನವಿ ಮಾಡಿದ್ದು, ಅದಕ್ಕೆ ಅಗತ್ಯವಾದ 20 ಎಕರೆ ಭೂಮಿ ನೀಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಪಾಟೀಲ್ ಅವರು, ವಿಜಯಪುರ ಜಿಲ್ಲೆಯ ಮುಳವಾಡ ಕೈಗಾರಿಕಾ ಪ್ರದೇಶದಲ್ಲಿ ಸಹ ಕೇನ್ಸ್ ಟೆಕ್ನಾಲಜೀಸ್ ತನ್ನ ಪಿಸಿಬಿ (Printed Circuit Board) ಉತ್ಪಾದನಾ ಘಟಕವನ್ನು ಸ್ಥಾಪಿಸಬೇಕೆಂದು ಆಹ್ವಾನ ನೀಡಿದ್ದಾರೆ. “ಮುಳವಾಡ ಪ್ರದೇಶದಲ್ಲಿ ವಿದ್ಯುತ್ ಮತ್ತು ನೀರಿನ ಯಾವುದೇ ಕೊರತೆ ಇಲ್ಲ; ಕೈಗಾರಿಕೆಗಳಿಗೆ ಇದು ಅತ್ಯುತ್ತಮ ಸ್ಥಳ” ಎಂದು ಅವರು ಹೇಳಿದ್ದಾರೆ.
1988ರಲ್ಲಿ ಸ್ಥಾಪನೆಯಾದ ಈ ಕಂಪನಿಯು ಮೈಸೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ್ದು, ಕೇವಲ 70 ಜನರಿಂದ ಪ್ರಾರಂಭವಾದ ಚಾಮರಾಜನಗರ ಘಟಕದಲ್ಲಿ ಈಗ 700ಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಒಟ್ಟಾರೆಯಾಗಿ 1,500 ಉದ್ಯೋಗಿಗಳನ್ನು ಹೊಂದಿರುವ ಈ ಕಂಪನಿಯು 250ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಗ್ರಾಹಕ ಸಂಸ್ಥೆಗಳಿಗೆ ಎಲೆಕ್ಟ್ರಾನಿಕ್ ಉತ್ಪನ್ನಗಳನ್ನು ಪೂರೈಸುತ್ತಿದೆ.
ಕೇನ್ಸ್ ಟೆಕ್ನಾಲಜೀಸ್‌ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಮೇಶ್ ಆರ್. ಕಣ್ಣನ್, ಅಧ್ಯಕ್ಷರಾದ ಸವಿತಾ ರಮೇಶ್, ಹಾಗೂ ನಿರ್ದೇಶಕರಾದ ಜಯರಾಮ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ, ಸಚಿವ ಪಾಟೀಲ್ ಅವರು ಮತ್ತೊಂದು ಎಲೆಕ್ಟ್ರಾನಿಕ್ ಕಂಪನಿಯಾದ ಸೈಯಂಟ್ ಡಿ.ಎಲ್.ಎಂ ಸಂಸ್ಥೆಯ ಅಧಿಕಾರಿಗಳನ್ನೂ ಭೇಟಿಯಾಗಿ, ಅವರ ತಾಂತ್ರಿಕ ಸಾಧನೆಗಳ ಕುರಿತು ಮಾಹಿತಿ ಪಡೆದರು. ಸೈಯಂಟ್ ಸಂಸ್ಥೆಯು ವಿನ್ಯಾಸ, ಡಿಜಿಟಲ್ ಟ್ವಿನ್ ಕ್ರಿಯೇಷನ್ ಹಾಗೂ ದೀರ್ಘಾವಧಿಯ ತಾಂತ್ರಿಕ ಸಹಭಾಗಿತ್ವ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.
ಈ ಭೇಟಿಯಲ್ಲಿ ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೇರಿದಂತೆ ಉನ್ನತ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
