ದಾವಣಗೆರೆ: ಪೊಲೀಸ್ ಇಲಾಖೆಯ ಹೆಸರಲ್ಲಿ ಬೆದರಿಕೆ ಹಾಕಿ ಚಿನ್ನಾಭರಣ ದರೋಡೆ ಮಾಡಿದ ಆರೋಪಕ್ಕೆ ಇಬ್ಬರು ಪಿಎಸ್ಐಗಳ ಸೇರಿದಂತೆ ನಾಲ್ವರು ಬಂಧಿತರು ಆಗಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದೆ. ಸಾರ್ವಜನಿಕರ ಸುರಕ್ಷತೆ ಕಾಪಾಡಬೇಕಾದ ಪೊಲೀಸ್ ಅಧಿಕಾರಿಗಳು ದರೋಡೆಗೆ ಕೈ ಹಾಕಿರುವ ಘಟನೆ ಜಿಲ್ಲೆಯಲ್ಲಿ ಆಕ್ರೋಶ ಮತ್ತು ಚರ್ಚೆಗೆ ಕಾರಣವಾಗಿದೆ.
ಬಂಧಿತರಲ್ಲಿ ಪಿಎಸ್ಐಗಳು, ಮತ್ತು ಅವರಿಗೆ ಸಹಕಾರ ನೀಡಿದ ದಾವಣಗೆರೆ ಹಾಗೂ ಶಿರಸಿ ಮೂಲದ ನಿವಾಸಿಗಳನ್ನು ಬಂದಿಸಿದ್ದಾರೆ
ಹೇಗೆ ಜರುಗಿತು ದರೋಡೆ?: ಕಾರವಾರದ ಆಭರಣ ತಯಾರಕ ವಿಶ್ವನಾಥ್, ದಾವಣಗೆರೆಯ ಚಿನ್ನದ ವ್ಯಾಪಾರಿಗಳಿಗೆ ಆಭರಣ ತಯಾರಿಸಿ ನೀಡುವ ಕೆಲಸ ಮಾಡುತ್ತಿದ್ದರು. ನಸುಕಿನ ವೇಳೆ ಹುಬ್ಬಳ್ಳಿಯಿಂದ ದಾವಣಗೆರೆಗೆ ಬಂದಿದ್ದ ವಿಶ್ವನಾಥನನ್ನು ಮಫ್ತಿಯಲ್ಲಿ ಇದ್ದ ಇಬ್ಬರು ಪಿಎಸ್ಐಗಳು ಹಿಂಬಾಲಿಸಿದ್ದರು.
ವಿಶ್ವನಾಥ್‌ನ್ನು ಬಲವಂತವಾಗಿ ಕೆಳಗಿಳಿಸಿ, ತಾವು ಪೊಲೀಸರು ಎಂದು ಹೇಳಿ ಬೆದರಿಕೆ ಹಾಕಿದ ಆರೋಪವಿದೆ. “ನಾನು ಹೇಗೆ ನಂಬಲಿ?” ಎಂದು ಪ್ರಶ್ನಿಸಿದಾಗ, ಆರೋಪಿಗಳು ಪೊಲೀಸ್ ಐಡಿ ಕಾರ್ಡ್ ತೋರಿಸಿ, ಪೊಲೀಸ್ ಜೀಪ್‌ನಲ್ಲಿ ಕೂರಿಸಿದ್ದರು. ಅಲ್ಲಿಂದ ಅವರನ್ನು ನಗರದ ಠಾಣೆಯೊಂದಕ್ಕೆ ಕರೆದೊಯ್ದು ನಂತರ ತಮ್ಮ ಖಾಸಗಿ ಕಾರಿನಲ್ಲಿ ಕೂರಿಸಿಕೊಂಡು ಹೊರಟಿದ್ದಾರೆ.
ದರೋಡೆ ವೇಳೆ ವಿಶ್ವನಾಥನ ಬಳಿಯಿಂದ 76 ಗ್ರಾಂ ಚಿನ್ನದ ಗಟ್ಟಿ ಹಾಗೂ 2.15 ಗ್ರಾಂ ಬೇಬಿ ರಿಂಗ್ ಬೆದರಿಕೆ ಹಾಕಿ ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಚಿನ್ನ ಕಿತ್ತುಕೊಂಡ ಬಳಿಕ, ವಿಶ್ವನಾಥನನ್ನು ಪುನಃ ದಾವಣಗೆರೆ ಬಸ್ ನಿಲ್ದಾಣಕ್ಕೆ ಬಿಟ್ಟು ಪರಾರಿಯಾಗಿದ್ದಾರೆ.
ಘಟನೆಯ ನಂತರ ಮನೆಮಂದಿಗೆ ತಿಳಿಸಿದ ವಿಶ್ವನಾಥ್, ಮತ್ತೆ ದಾವಣಗೆರೆಗೆ ಬಂದು ಠಾಣೆಗೆ ದೂರು ನೀಡಿದ್ದಾರೆ. ತನಿಖೆ ವೇಳೆ ಆರೋಪಿಗಳ ಬಲವಾದ ಸಾಕ್ಷ್ಯಗಳು ದೊರೆತ ಹಿನ್ನೆಲೆಯಲ್ಲಿ ಇಬ್ಬರು ಪಿಎಸ್ಐಗಳು ಹಾಗೂ ಸಹಾಯಕರಿಬ್ಬರನ್ನು ಬಂಧಿಸಿದ್ದಾರೆ. ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಹಾಗೂ ನಕಲಿ ಗನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.
