ದಾವಣಗೆರೆ: 70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ದಾವಣಗೆರೆ ನಗರ ಇಂದು ಇತಿಹಾಸ ನಿರ್ಮಿಸಲಿದೆ. ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯ ಜಿಲ್ಲಾ ಘಟಕದ ನೇತೃತ್ವದಲ್ಲಿ, ವಿಶ್ವದಾಖಲೆ ಗುರಿಯೊಂದಿಗೆ 7 ಕಿಲೋಮೀಟರ್ ಉದ್ದದ ಕನ್ನಡ ಬಾವುಟ ಮೆರವಣಿಗೆ ಭವ್ಯವಾಗಿ ಆರಂಭಗೊಂಡಿದೆ.
ಬೆಣ್ಣೆನಗರಿಯ ಪ್ರಮುಖ ರಸ್ತೆಗಳ ಮೂಲಕ ಸಾಗಿರುವ ಈ ಧ್ವಜ ಮೆರವಣಿಗೆಯಲ್ಲಿ 15 ಸಾವಿರ ವಿದ್ಯಾರ್ಥಿಗಳು ಹಾಗೂ ನೂರಾರು ಕನ್ನಡಪರ ಸಂಘಟನೆಗಳು ಪಾಲ್ಗೊಂಡಿದ್ದು, ನಗರವನ್ನು ಕೆಂಪು-ಹಳದಿ ಸಂಭ್ರಮದ ಸಾಗರವಾಗಿ ಮಾರ್ಪಟ್ಟಿದೆ. ನಗರದ ಪ್ರಮುಖ ಏಳು ವೃತ್ತಗಳನ್ನು ಸ್ಪರ್ಶಿಸುವ ಈ ಮೆರವಣಿಗೆ, ಕನ್ನಡ ಬಾವುಟದ ಮಹಿಮೆ, ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಜನಮನ ಸೆಳೆಯಿತು.
ಈ 7 ಕಿಮೀ ಉದ್ದದ ಧ್ವಜ ಮೆರವಣಿಗೆ ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಆಯ್ಕೆಯಾಗಿ ಅಧಿಕೃತವಾಗಿ ವಿಶ್ವದಾಖಲೆ ಪಟ್ಟಿಗೆ ಸೇರ್ಪಡೆಯಾಗಿರುವುದು ರಾಜ್ಯದ ಕನ್ನಡ ಅಭಿಮಾನಿಗಳಿಗೆ ಹೆಮ್ಮೆಯ ವಿಷಯವಾಗಿದೆ.
ಕಾರ್ಯಕ್ರಮದ ಸಂದರ್ಭದಲ್ಲಿ ಸಂಘಟಕರು ಮಾತನಾಡಿ, “ಕನ್ನಡ ಮಾತ್ರವಲ್ಲ, ಕನ್ನಡಿಗರ ಆತ್ಮಗೌರವ, ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಜಗತ್ತಿಗೆ ತೋರಿಸುವ ಉದ್ದೇಶದಿಂದ ಈ ಐತಿಹಾಸಿಕ ಮೆರವಣಿಗೆ ನಡೆಸಲಾಗಿದೆ” ಎಂದು ತಿಳಿಸಿದರು.
ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಎನ್.ಎಸ್.ಎಸ್ ಘಟಕ, ಯುವಕರು ಮತ್ತು ಕನ್ನಡಪರ ಸಂಘಟನೆಗಳು ಈ ಮೆರವಣಿಗೆಯನ್ನು ಭವ್ಯ ಮತ್ತು ಶಿಸ್ತಿನೊಂದಿಗೆ ನಡೆಸಲು ಮಹತ್ತರ ಪಾತ್ರವಹಿಸಿದವು.
ರಾಜ್ಯೋತ್ಸವದ ಸಂಭ್ರಮಕ್ಕೆ ಹೊಸ ಅಳತೆಯನ್ನು ಕೊಟ್ಟಿರುವ ಈ ಮೆರವಣಿಗೆ, ಮುಂದಿನ ಪೀಳಿಗೆಗೆ ಕನ್ನಡದ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಮೂಡಿಸುವಂತಿದೆ.
