ದಾವಣಗೆರೆ: ಮಧ್ಯಕರ್ನಾಟಕದ ಬೆಣ್ಣೆನಗರಿಯಲ್ಲಿ ಅಖಿಲ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಬಿ.ಎಸ್. ಚನ್ನಬಸಪ್ಪ & ಸನ್ಸ್ ಸಹಯೋಗದಲ್ಲಿ ತಯಾರಿಸಲಾದ 7ಕಿ.ಮೀ. ಉದ್ದದ ಕನ್ನಡ ಬಾವುಟ ಶುಕ್ರವಾರ ವಿಶ್ವದಾಖಲೆ ಸೃಷ್ಠಿಸಿತು.
ಇಲ್ಲಿನ ಜಯದೇವ ವೃತ್ತದಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಬಾವುಟದ ಮೆರವಣಿಗೆಗೆ ಚಾಲನೆ ನೀಡಿದರು. ವಿವಿಧ ಕಲಾತಂಡಗಳು ಮತ್ತು ಭುವನೇಶ್ವರಿ, ಇಮ್ಮಡಿ ಪುಲಿಕೇಶಿ, ಸಿದ್ಧಗಂಗಾ ಮಠ, ಗಾಜಿನ ಮನೆ, ಸಂತೆಬೆನ್ನೂರು ಪುಷ್ಕರಣಿ, ಜೆ.ಹೆಚ್. ಪಟೇ ಅವರ ಸ್ತಬ್ಧ ಚಿತ್ರಗಳೊಂದಿಗೆ ಸಾಗಿದ ಮೆರವಣಿಗೆಯು ನಗರದ ಐಟಿಐ ಕಾಲೇಜು ವೃತ್ತ, ವಿದ್ಯಾನಗರ ಗಾಂಧಿ ವೃತ್ತ, ಗುಂಡಿ ವೃತ್ತ, ಶಾರದಾಂಬ ದೇವಸ್ಥಾನದ ವೃತ್ತ, ರಿಂಗ್ ರಸ್ತೆ ವೃತ್ತ, ಪಿ.ಬಿ. ರಸ್ತೆ ಮುಖಾಂತರ ಎವಿಕೆ ರಸ್ತೆಗೆ ಆಗಮಿಸಿ ಅಲ್ಲಿಂದ ಅಂಬೇಡ್ಕರ್ ವೃತ್ತದಿಂದ ಜಯದೇವ ವೃತ್ತಕ್ಕೆ ಬಂದು ಸಮಾಪನಗೊಂಡಿತು.
70ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಮಿತಿಯಿಂದ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ 7 ಕಿ.ಮೀ. ಉದ್ದದ ಕನ್ನಡ ಬಾವುಟವನ್ನು ಐತಿಹಾಸಿಕ ಮೆರವಣಿಗೆ ಮೂಲಕ ಆರಂಭಿಸಲಾಯಿತು. ವಿವಿಧ ಶಾಲೆಗಳಿಂದ ಸುಮಾರು 15 ಸಾವಿರ ವಿದ್ಯಾರ್ಥಿಗಳು ಏಳು ಕಿಲೋಮೀಟರ್ ದೂರ ಧ್ವಜ ಮೆರವಣಿಗೆಯನ್ನು ಹಿಡಿದು ಸಾಗಿದರು. ಲಂಡನ್ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ವಿಶ್ವದಾಖಲೆ ಪುಟಕ್ಕೆ ಬಾವುಟ ಸೇರ್ಪಡೆಗೊಂಡಿತು.
ಕಾರ್ಯಕ್ರಮದಲ್ಲಿ ಸಮಿತಿಯ ರಾಜ್ಯಾಧ್ಯಕ್ಷ ಗುರುದೇವ್ ನಾರಾಯಣ ಕುಮಾರ್ ಧ್ವಜಾರೋಹಣ ನೆರವೇರಿಸಿದರು, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಬಿ.ಕೆ. ಮಂಜುನಾಥ ಮಾಗನಹಳ್ಳಿ ಧ್ವಜ ಹಸ್ತಾಂತರ ಮಾಡಿದರು. ಬಿ.ಎಸ್. ಚನ್ನಬಸಪ್ಪ & ಸನ್ಸ್ನ ಮುಖ್ಯಸ್ಥ ಮೃನಾಳ್ ಬಂಕಾಪುರ ವಿಶೇಷ ಅತಿಥಿಯಾಗಿ ಪಾಲ್ಗೊಂಡಿದ್ದರು.
