ದಾವಣಗೆರೆ: ಯುವಕನೊಬ್ಬ ಚಲಿಸುವ ರೈಲಿಗೆ ತಲೆ ಕೊಟ್ಟು ಉಸಿರು ಚೆಲ್ಲಿದ ಘಟನೆ ಗುರುವಾರ ಬೆಳ್ಳಂಬೆಳಗ್ಗೆ ನಗರದ ಎಪಿಎಂಸಿ ಸಮೀಪದ ರೈಲ್ವೆ ಅಂಡರ್ ಪಾಸ್ ಬಳಿ ನಡೆದಿದೆ.
ನಗರ ಸಮೀಪದ ಹಳೇ ಚಿಕ್ಕನಹಳ್ಳಿ (ಹರಳಯ್ಯ ನಗರ)ಯ ತರುಣ್ (16) ಎಂದು ತಿಳಿದು ಬಂದಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಚಲಿಸುವ ರೈಲಿಗೆ ಬೆಳಗಿನ ಜಾವ ಬಿದ್ದಿದ್ದು, ಯುವಕನ ದೇಹ ಒಂದು ಕಡೆ, ಶಿರ ಒಂದು ಕಡೆ ಬಿದ್ದಿದೆ. ಶಿರ ಹಳಿಯ ಆಚೆ ಬಿದ್ದಿದ್ದರೆ, ದೇಹ ಹಳಿಯ ಮಧ್ಯೆದಲ್ಲಿ ಬಿದ್ದಿದ್ದು, ಈ ದೃಶ್ಯ ಎದೆಯನ್ನೇ ನಡುಗಿಸುತ್ತಿದೆ.
ಯುವಕ ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಿದ್ದಾರೆ. ಈ ಘಟನೆ ಕುರಿತು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.