ದಾವಣಗೆರೆ: “ಪ್ಲಾಟ್ ಫಾರ್ಮ್ ಆಧಾರಿತ ಗಿಗ್ ಕಾರ್ಮಿಕರ ವಿಧೇಯಕ ಜಾರಿಗೆ ತರುವ ಮೂಲಕ ಅಪಘಾತ ಪರಿಹಾರ, ವಸತಿ ಸೇರಿದಂತೆ ಈ ರೀತಿಯಲ್ಲಿ ಹಂತ ಹಂತವಾಗಿ ವಿವಿಧ ಸೌಲಭ್ಯ ಒದಗಿಸಲು ನಿರ್ಧಾರ ಮಾಡಲಾಗಿದ್ದು, ಗಿಗ್ ಕಾರ್ಮಿಕರಿಗೆ ಅನುಕೂಲವಾಗುವಂತೆ ಶೀಘ್ರದಲ್ಲಿಯೇ ಹೊಸ ಗಿಗ್ ಮಸೂದೆ ಜಾರಿಗೆ ತರಲಾಗುವುದು” ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಗಿಗ್ ಮಸೂದೆ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಗಿಗ್ (ಆಹಾರ ಸರಬರಾಜು) ಕಾರ್ಮಿಕರಿಗಾಗಿ ಈ ಮಸೂದೆ ಜಾರಿಗೊಳಿಸಲಾಗುತ್ತಿದೆ. ಇದರಿಂದ ಅವರಿಗೆ ಸಾಕಷ್ಟು ಅನುಕೂಲವಾಗಲಿದೆ” ಎಂದರು.
ಕಾರ್ಮಿಕ ಇಲಾಖೆಯಲ್ಲಿ ಕಿಟ್ ವಿಷಯದಲ್ಲಿ ಲೂಟಿ ಹೊಡೆಯಲಾಗುತ್ತಿದೆ ಎಂಬ ಕಾರ್ಮಿಕ ಒಕ್ಕೂಟದ ಆರೋಪಕ್ಕೆ ಪ್ರತಿಕ್ರಿಯಿಸಿದ ಲಾಡ್, “ಯಾರ ಆರೋಪಗಳನ್ನು ಸುಲಭವಾಗಿ ನಿರ್ಲಕ್ಷ್ಯ ಮಾಡಲು ಆಗಲ್ಲ. ನಾನು ಸಚಿವನಾಗಿ ಬಂದಾಗಿನಿಂದ ಕಿಟ್‌ಗಳನ್ನು ಟೆಂಡರ್ ಮೂಲಕವೇ ಖರೀದಿಸಲಾಗುತ್ತದೆ. ಯಾವುದೇ ಪಕ್ಷದವರಿರಲಿ ಆಯಾ ಶಾಸಕರಿಂದಲೇ ಕಿಟ್ ಕೊಡಿಸುತ್ತೇವೆ. ಹಾಗಿದ್ದೂ ಕಿಟ್ ಗಳಲ್ಲಿ ಅಕ್ರಮ ನಡೆದಿದೆ ಎಂದರೆ ದೂರು ನೀಡಿದರೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇನೆ” ಎಂದು ಭರವಸೆ ನೀಡಿದರು.
“ದೇಶದಲ್ಲಿ ಶೇ. 90ರಷ್ಟು ಕಾರ್ಮಿಕರು ಅಸಂಘಟಿತ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಶೇ. 85ರಷ್ಟು ಕಾರ್ಮಿಕರು ಇದ್ದಾರೆ. ದೇಶದ ಶೇ. 50ರಷ್ಟು ಜಿಡಿಪಿಯು ಅಸಂಘಟಿತ ವಲಯಗಳ ಕಾರ್ಮಿಕರ ಆದಾಯದಿಂದ ಬರುತ್ತದೆ. ಹಾಗಾಗಿ ಅವರ ಸುರಕ್ಷತೆ ಮತ್ತು ಸಾಮಾಜಿಕ ಭದ್ರತೆಯು ನಮ್ಮ ಸರಕಾರದ ಆದ್ಯತೆಯಾಗಿದೆ” ಎಂದರು.
“ಜಿಎಸ್‌ಟಿಯಿಂದ ದೇಶದಲ್ಲಿ ಸಾಹುಕಾರರಿಗೆ ಅನುಕೂಲವಾಗಿದೆ, ಸುಮಾರು ಹದಿನಾರುವರೆ ಲಕ್ಷ ಕೋಟಿ ರೂ. ಮಾಫಿ ಆಗಿದೆ. ಇದರಿಂದ ರೈತರು, ಬಡವರು ಹಾಗೂ ಮಧ್ಯಮ ವರ್ಗಕ್ಕೆ ಯಾವುದೇ ಅನುಕೂಲವಾಗಿಲ್ಲ. ಈ ಬಗ್ಗೆ ಜನರು ಅರ್ಥ ಮಾಡಿಕೊಳ್ಳಬೇಕಿದೆ” ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.
“ಜಿಎಸ್‌ಟಿಯಲ್ಲಿ ರಾಜ್ಯಕ್ಕೆ ನಡೆಯುತ್ತಿರುವ ಅನ್ಯಾಯದ ಬಗ್ಗೆ ಬಹಿರಂಗವಾಗಿ ಜನರಿಗೆ ತಿಳಿದಿದೆ. ಶ್ರೀಮಂತರಿಗೆ ಜಿಎಸ್‌ಟಿ ವಿಧಿಸಿದೆ ಬಡಜನರ ಮೇಲೆ ತೆರಿಗೆ ವಿಧಿಸುತ್ತಿರುವುದು ತಿಳಿದಿರುವ ವಿಷಯ ನಾನು ದಾಖಲಾತಿ ಕೊಡುವುದೇನಿದೆ” ಎಂದು ಲಾಡ್ ಪ್ರಶ್ನಿಸಿದರು.
ಡಿಸೆಂಬರ್‌ನಲ್ಲಿ ಸಿಎಂ ಬದಲಾವಣೆ ಆಗುವುದಾಗಿ ನಿಮ್ಮ ಕಾಂಗ್ರೆಸ್ ಶಾಸಕರೇ ಹೇಳಿದ್ದಾರಲ್ಲ ಎನ್ನುವ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, “ಅದು ಅವರವರ ವೈಯಕ್ತಿಕ ಹೇಳಿಕೆ ಈ ಬಗ್ಗೆ ನನಗೆ ಗೊತ್ತಿಲ್ಲ. ಸಿಎಂ ಬದಲಾವಣೆ ಕುರಿತು ನನಗೆ ತಿಳಿದಿಲ್ಲ” ಎಂದರು. ಸಿಗಂಧೂರು ಸೇತುವೆ ಉದ್ಘಾಟನೆಗೆ ಸ್ಥಳೀಯ ಶಾಸಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ ಆ ಕುರಿತು ಮಾಹಿತಿ ಇಲ್ಲ ಎಂದರು.