ಬಾಗಲಕೋಟೆ: “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಸಚಿವ ರಾಜನಾಥ ಸಿಂಗ್ ಅವರನ್ನು ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ ಅವರು ಸಚಿವ ಪ್ರಲ್ಹಾದ್ ಜೋಶಿ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದ್ದಾರೆ” ಎಂದು ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಕೇಂದ್ರ ಸಚಿವರುಗಳನ್ನು ಭೇಟಿ ಮಾಡಲು ಸಿಎಂ, ಡಿಸಿಎಂ ದೆಹಲಿಗೆ ತೆರಳಿದ್ದಾರೆ. ಸಿಎಂ ಬದಲಾವಣೆ ವಿಚಾರ ಮಾಧ್ಯಮಗಳ ಸೃಷ್ಟಿ” ಎಂದು ಹೇಳಿದ್ದಾರೆ.
“ಸಿಎಂ ಬದಲಾವಣೆ ವಿಚಾರ ಊಹಾಪೋಹ. ಅವರು ದೆಹಲಿಗೆ ತೆರಳಿದಾಗೆಲ್ಲ ಮಾಧ್ಯಮದವೇ ಈ ರೀತಿ ಹೊಸ ಸುದ್ದಿಗಳನ್ನು ಹಬ್ಬಿಸುತ್ತಾರೆ” ಎಂದರು.
“ನಾನೂ ಕೂಡ ಸಚಿವ ಸ್ಥಾನದ ಆಕಾಂಕ್ಷಿ, ಅವಕಾಶ ಕೊಟ್ಟರೆ ಸಮರ್ಥವಾಗಿ ನಿಭಾಯಿಸುವೆ. ಯಾರದೋ ಹೊಟ್ಟೆ ಉರಿಸುವುದಕ್ಕಾಗಿ ಅಥವಾ ದ್ವೇಷದ ರಾಜಕಾರಣಕ್ಕಾಗಿ ಸಚಿನಾಗುವುದಿಲ್ಲ. 50 ವರ್ಷದಿಂದ ನಮ್ಮ ಕುಟುಂಬ ಕಾಂಗ್ರೆಸ್ಸಿನಲ್ಲಿದೆ. ಒಂದು ಬಾರಿ ಅವಕಾಶ ನೀಡಿದರೆ ಸಮರ್ಥವಾಗಿ ಕಾರ್ಯನಿರ್ವಹಿಸುವೆ” ಎಂದರು.
“ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ಶಾಸಕರ ಬೆಂಬಲವಿಲ್ಲ.” ನಾನೇ ಐದು ವರ್ಷ ಸಿಎಂ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕರು, “ಸಿಎಂ ಸ್ಪಷ್ಟೀಕರಣ ನೀಡುವುದರಲ್ಲಿ ತಪ್ಪೇನಿದೆ. ಹಿಂದೆ ಐದು ವರ್ಷ ಸಿಎಂ ಆಗಿ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಚಿಂತಿಸಲು ಹೈಕಮಾಂಡ್ ಇದೆ. ಯಾವ ಸಂದರ್ಭದಲ್ಲಿ ಏನು ಆಗಬೇಕು ಅದು ಆಗುತ್ತದೆ” ಎಂದರು.