ಹಾವೇರಿ: “ನೀವು ಬೆಂಗಳೂರಿನಲ್ಲೇ ಇರುತ್ತೀರಿ, ಕ್ಷೇತ್ರದ ಕಡೆ ಗಮನವೇ ಇಲ್ಲ. ನೀಡಿದ ಭರವಸೆಗಳೆಲ್ಲಾ ಏನಾದವು? ಅಭಿವೃದ್ಧಿ ಎಲ್ಲಿ?” ಇದು ಹಾವೇರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಅವರಿಗೆ ಸ್ವಕ್ಷೇತ್ರದ ಜನರೇ ಕೇಳುತ್ತಿರುವ ಖಾರವಾದ ಪ್ರಶ್ನೆ.
ತಾವು ಕಾಲಿಟ್ಟಲ್ಲೆಲ್ಲಾ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಗುರಿಯಾಗುತ್ತಿರುವ ಲಮಾಣಿ, ಸದ್ಯ ಅಭಿವೃದ್ಧಿ ಶೂನ್ಯ ಆರೋಪದಡಿ ತೀವ್ರ ಮುಜುಗರ ಎದುರಿಸುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಶಾಸಕ ಲಮಾಣಿ ಪ್ರತಿಯೊಂದು ಗ್ರಾಮ ಭೇಟಿಯೂ ಪ್ರತಿಭಟನೆಯ ಸ್ವರೂಪ ಪಡೆದುಕೊಳ್ಳುತ್ತಿದೆ.
ಇತ್ತೀಚೆಗೆ ಕನವಳ್ಳಿ ಗ್ರಾಮಕ್ಕೆ ಅವರು ಭೇಟಿ ನೀಡಿದಾಗ, ರೊಚ್ಚಿಗೆದ್ದ ಗ್ರಾಮಸ್ಥರು ಪಕ್ಷಭೇದ ಮರೆತು ಅವರ ಕಾರನ್ನು ಅಡ್ಡಗಟ್ಟಿ ಘೇರಾವ್ ಹಾಕಿದರು. ನಮ್ಮ ಗ್ರಾಮದ ರಸ್ತೆಗಳು ಹೊಂಡಗುಂಡಿಗಳಿಂದ ತುಂಬಿವೆ, ಸರಿಯಾದ ಚರಂಡಿ ವ್ಯವಸ್ಥೆ ಇಲ್ಲ.
ಅನುದಾನ ತಂದು ಅಭಿವೃದ್ಧಿ ಮಾಡುವುದನ್ನು ಬಿಟ್ಟು ಕೇವಲ ಭರವಸೆ ನೀಡುತ್ತಿದ್ದೀರಿ, ಎಂದು ಜನತೆ ತರಾಟೆಗೆ ತೆಗೆದುಕೊಂಡರು. ಜನರ ಪ್ರಶ್ನೆಗಳಿಗೆ ಉತ್ತರಿಸದೆ, ಕಾರಿನಿಂದ ಇಳಿಯುವ ಸೌಜನ್ಯವನ್ನೂ ತೋರದೆ ಶಾಸಕರು ಅಲ್ಲಿಂದ ತೆರಳಿದ್ದು ಗ್ರಾಮಸ್ಥರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಇದೇ ರೀತಿಯ ಘಟನೆ ಹೊಸರಿತ್ತಿ ಗ್ರಾಮದಲ್ಲೂ ಮರುಕಳಿಸಿದೆ. ಇಲ್ಲಿನ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಶಾಸಕರನ್ನು ಪ್ರಶ್ನಿಸಿದ್ದಾರೆ. ಗ್ರಾಮದಲ್ಲಿ “ಶಾದಿ ಹಾಲ್” ನಿರ್ಮಾಣಕ್ಕೆ ಮೀಸಲಿಟ್ಟಿದ್ದ ಕೋಟಿ ರೂಪಾಯಿ ಅನುದಾನದ ದುರ್ಬಳಕೆಯಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಅಭಿವೃದ್ಧಿ ಕಾರ್ಯಗಳ ಬಗ್ಗೆ ಶಾಸಕರ ನಿರ್ಲಕ್ಷ್ಯವನ್ನು ಖಂಡಿಸಿದ್ದಾರೆ. ಜನರ ಆಕ್ರೋಶಕ್ಕೆ ಉತ್ತರ ನೀಡಲಾಗದೆ, ಸಬೂಬು ಹೇಳಿ ಅಲ್ಲಿಂದಲೂ ಲಮಾಣಿ ಕಾಲ್ಕಿತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಸರ್ಕಾರಿ ಕಾರಿನಲ್ಲಿ ಪುತ್ರನ ದರ್ಬಾರ್: ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಾರೆ ಎಂಬ ಆರೋಪದ ಜೊತೆಗೆ, ರುದ್ರಪ್ಪ ಲಮಾಣಿ ಕುಟುಂಬದ ವಿರುದ್ಧ ಅಧಿಕಾರ ದುರ್ಬಳಕೆಯ ಆರೋಪವೂ ಕೇಳಿಬಂದಿದೆ. ಕೆಲವು ತಿಂಗಳ ಹಿಂದೆ ಲಮಾಣಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದಾಗ, ಪುತ್ರ ದರ್ಶನ್, ಶಾಸಕರಿಗೆ ನೀಡಲಾಗಿದ್ದ ಸರ್ಕಾರಿ ಕಾರನ್ನು (KA 05 G 6000) ವೈಯಕ್ತಿಕ ಓಡಾಟಕ್ಕೆ ಬಳಸಿಕೊಂಡಿದ್ದರು.
ಬೆಂಗಳೂರಿನಿಂದ ಹಾವೇರಿಯವರೆಗೆ ಬೆಂಬಲಿಗರೊಂದಿಗೆ ಇದೇ ಕಾರಿನಲ್ಲಿ ದರ್ಬಾರ್ ನಡೆಸಿದ್ದು ತೀವ್ರ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿತ್ತು. ಶಾಸಕರ ಅನುಪಸ್ಥಿತಿಯಲ್ಲಿ ಅವರ ಮಗ ಸರ್ಕಾರಿ ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದು ಜನರ ಅಸಮಾಧಾನಕ್ಕೆ ಮತ್ತೊಂದು ಕಾರಣವಾಗಿದೆ.
ಕ್ಷೇತ್ರದ ಜನರ ಸಮಸ್ಯೆಗಳನ್ನು ಆಲಿಸದೆ, ಬೆಂಗಳೂರಿನ ರಾಜಕೀಯದಲ್ಲೇ ಹೆಚ್ಚು ಸಕ್ರಿಯರಾಗಿದ್ದಾರೆ ಎಂಬ ಆರೋಪ ಹೊತ್ತಿರುವ ರುದ್ರಪ್ಪ ಲಮಾಣಿ, ಇದೀಗ ಸ್ವಕ್ಷೇತ್ರದಲ್ಲೇ ಜನರ ವಿಶ್ವಾಸ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೋದಲ್ಲಿ ಬಂದಲ್ಲೆಲ್ಲಾ ಎದುರಾಗುತ್ತಿರುವ ಈ ಪ್ರತಿರೋಧ, ಅವರ ರಾಜಕೀಯ ಭವಿಷ್ಯಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
