ಹಾವೇರಿ: ದಸರಾ ಉದ್ಘಾಟನೆ ಯಾರು ಮಾಡಬೇಕು ಎಂಬುದನ್ನು ಸರ್ಕಾರ ಆಯ್ಕೆ ಮಾಡುತ್ತದೆ. ಅದು ಸರ್ಕಾರದ ಅಧಿಕಾರ ಮತ್ತು ಹಕ್ಕು. ಕೋರ್ಟ್‌ಗೆ ಹೋದರೂ ಸರ್ಕಾರದ ನಿರ್ಧಾರವೇ ಅಂತಿಮ ಅಂತ ಬರುತ್ತದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಹಾವೇರಿಯಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಯಾವತ್ತೂ ಧರ್ಮ ರಾಜಕಾರಣ ಮಾಡುವುದಿಲ್ಲ. ಬಿಜೆಪಿಯವರು ಎಲ್ಲದಕ್ಕೂ ವಿರೋಧ ಮಾಡುತ್ತಾರೆ. ಅವರು ರಾಜಕೀಯ ಮಾಡಲಿ. ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಆಯ್ಕೆ ಮಾಡಲಾಗಿದೆ.
ಕನ್ನಡಾಂಬೆ ಬಗ್ಗೆ ಬಾನು ಮುಸ್ತಾಕ್ ಅವರು ಯಾವಾಗ ಏನು ಹೇಳಿದರೋ ಗೊತ್ತಿಲ್ಲ. ಯಾವಾಗಲೋ ಹೇಳಿದ್ದನ್ನು ಈಗ ಕನೆಕ್ಟ್ ಮಾಡುವುದಕ್ಕೆ ಆಗುವುದಿಲ್ಲ. ಕನ್ನಡ ತಾಯಿ ನಾವು ಒಪ್ಪಿಕೊಳ್ತೀವಿ. ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಹೇಳಿದರು.
ಜಾತಿ ಗಣತಿ: ಜಾತಿ ಗಣತಿ ಗಂಭೀರವಾಗಿ ಮಾಡುತ್ತಿಲ್ಲ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಬದಲಾವಣೆ, ತಿದ್ದುಪಡಿಗೆ ಅವಕಾಶವಿದೆ. ಜಾತಿ ಗಣತಿ ವಿಚಾರದಲ್ಲಿ ನಮ್ಮದೂ ಲೋಪ ಇದೆ. ಆಯಾ ಜಾತಿಯವರಿಗೆ ಇನ್ನೊಂದು ಸಲ ಮನವರಿಕೆ ಮಾಡಿಕೊಡುತ್ತೇವೆ. ನಿಮ್ಮ ಜಾತಿಯನ್ನು ಸರಿಯಾಗಿ ಬರೆಸಿ ಎಂದು ಮನವರಿಕೆ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್‌ನಿಂದ ಮುಸ್ಲಿಂ ತುಷ್ಟೀಕರಣ ಹೆಚ್ಚಾಗಿದೆ ಎಂಬ ಬಸವರಾಜ ಬೊಮ್ಮಾಯಿ ಅವರ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಮುಸ್ಲಿಂರು ಇನ್ನೂ ಗುಡಿಸಲಲ್ಲಿ ಇದ್ದಾರೆ. ಅನೇಕರಿಗೆ ಕುಡಿಯೋಕೆ ನೀರಿಲ್ಲ, ಶೌಚಾಲಯವಿಲ್ಲ. ನಾವು ಅವರಿಗೆ ಬಹಳ ದೊಡ್ಡಾದಾಗಿ ಏನೂ ಮಾಡಿಲ್ಲ. ಪಾಕಿಸ್ತಾನದ ಜಿಂದಾಬಾದ್ ಅಂತ ಕೂಗಿದವರನ್ನು ಸಮರ್ಥನೆ ಮಾಡುವುದಿಲ್ಲ. ಹಾಗೆ ಕೂಗಿದವರನ್ನು ಈಗಾಗಲೇ ಬಂಧಿಸಿದ್ದಾರೆ. ಓಲೈಕೆ ಮಿತಿ ಮೀರಿಲ್ಲ. ಬಿಜೆಪಿಯವರು ಹಾಗೆ ತೋರಿಸುತ್ತಿದ್ದಾರೆ. ಗಣೇಶೋತ್ಸವ ಸಂದರ್ಭದಲ್ಲಿ ಪ್ರಚೋದನೆಕಾರಿಯಾಗಿ ಮಾತಾಡಿದರೆ ಎಲ್ಲ ಕಡೆ ಕೇಸ್ ಹಾಕುತ್ತಾರೆ ಎಂದು ಹೇಳಿದರು.
ಆಪರೇಷನ್ ಸಿಂಧೂರ್ ನಂತರ ಇಂಡಿಯಾ-ಪಾಕ್ ಕ್ರಿಕೆಟ್ ಮ್ಯಾಚ್ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ಪರ್ಮಿಷನ್ ಕೊಟ್ಟವರು ಯಾರು? ಬೀಪ್ ಸಾಗಿಸೋದ್ರಲ್ಲಿ ಭಾರತ ನಂಬರ್ 2 ಇದೆ. ಬೀಪ್ ಬ್ಯಾನ್ ಮಾಡಬೇಕು ಎಂದು ಹೇಳುವವರು ಇವರೇ. ಆದರೆ, ಅದನ್ನು ಹೆಚ್ಚಾಗಿ ರಫ್ತು ಮಾಡುತ್ತಾರೆ. ಅವರೇ ಪರ್ಮಿಶನ್ ಕೊಟ್ಟು ಅವರೇ ವಿರೋಧ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಸೆಪ್ಟೆಂಬರ್ ಕ್ರಾಂತಿ: ಸೆಪ್ಟೆಂಬರ್ ಕ್ರಾಂತಿ ಬಗ್ಗೆ ಮಾತನಾಡಿ, ಸರ್ಕಾರದಲ್ಲಿ ಶಾಂತಿ ಇದ್ದರೆನೇ ಆರಾಮ ಇರುತ್ತದೆ. ಪ್ರತಿದಿನ ಕ್ರಾಂತಿ ಇದ್ದರೆ ಸರ್ಕಾರ ನಡೆಯೋದು ಹೇಗೆ? ಸಚಿವ ಸಂಪುಟ ವಿಸ್ತರಣೆಗೆ ಸಚಿವಾಂಕ್ಷಿಗಳ ಒತ್ತಾಯ ಸಹಜ. ಎಲ್ಲರಿಗೂ ಮಂತ್ರಿ ಆಗಬೇಕು ಅಂತ ಇರುತ್ತೆ. ನಮ್ಮಲ್ಲಿ ಅನೇಕರು ಹಿರಿಯರಿದ್ದಾರೆ. ಮಾಡೋದು ಬಿಡೋದು ವರಿಷ್ಠರಿಗೆ ಬಿಟ್ಟಿದ್ದು ಎಂದು ಚುಟುಕಾಗಿ ಉತ್ತರಿಸಿದರು.