Home ನಮ್ಮ ಜಿಲ್ಲೆ ಹಾವೇರಿ ಧನ್ ಧಾನ್ಯ ಕೃಷಿ ಯೋಜನೆ: ಹಾವೇರಿ, ಗದಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ

ಧನ್ ಧಾನ್ಯ ಕೃಷಿ ಯೋಜನೆ: ಹಾವೇರಿ, ಗದಗಕ್ಕೆ ಕೇಂದ್ರ ಸರ್ಕಾರ ಬಂಪರ್‌ ಕೊಡುಗೆ

0

ಹಾವೇರಿ/ಗದಗ: ಕರ್ನಾಟಕದ ಕೃಷಿಕರಿಗೆ ಮತ್ತೊಂದು ಸಂತಸದ ಸುದ್ದಿ ಬಂದಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ “ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ”ಗೆ ಹಾವೇರಿ ಹಾಗೂ ಗದಗ ಜಿಲ್ಲೆಗಳು ಸೇರ್ಪಡೆಗೊಂಡಿವೆ. ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ ವರ್ಚ್ಯುಯಲ್ ಮೂಲಕ ಪ್ತಧಾನಮಂತ್ರಿ ಧನ – ಧಾನ್ಯ ಕೃಷಿ ಯೋಜನೆ ಉದ್ಘಾಟನೆ ನೆರವೇರಿಸದರು.

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ, ಮಾಜಿ ಶಾಸಕ ವೀರುಪಾಕ್ಷಪ್ಪ ಬಳ್ಳಾರಿ, ಮುಖಂಡ ಡಾ ಬಸವರಾಜ ಕೇಲಗಾರ, ಸೇರಿದಂತೆ ರೈತರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ದೇಶದ 100 ಜಿಲ್ಲೆಗಳ ಪೈಕಿ ಈ ಎರಡು ಜಿಲ್ಲೆಗಳು ಈಗ ಆಯ್ಕೆಯಾಗಿದ್ದು, ಕೃಷಿ ಉತ್ಪಾದನೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಸೌಲಭ್ಯಗಳಲ್ಲಿ ಕ್ರಾಂತಿಯನ್ನು ತರಲಿವೆ. ಈ ಯೋಜನೆ ಅಡಿಯಲ್ಲಿ ಕೃಷಿ ಉತ್ಪಾದನೆಗೆ ತಂತ್ರಜ್ಞಾನ ಸಹಾಯ, ನೀರಾವರಿ ಯೋಜನೆಗಳ ಬಲವರ್ಧನೆ, ಸಂಗ್ರಹಣಾ ಘಟಕಗಳ ನಿರ್ಮಾಣ ಮತ್ತು ರೈತರಿಗೆ ಸಾಲ ಹಾಗೂ ಬೆಂಬಲ ಹಣಕಾಸು ನೀಡಲಾಗುತ್ತದೆ. ಇದರ ಮುಖ್ಯ ಉದ್ದೇಶ “ಮಣ್ಣಿನಿಂದ ಮಾರುಕಟ್ಟೆವರೆಗಿನ ಪೂರೈಕೆ ಸರಪಳಿಯನ್ನು ಬಲಪಡಿಸುವುದು” ಆಗಿದೆ.

ಯೋಜನೆಯ ಪ್ರಮುಖ ಅಂಶಗಳು

ಕೃಷಿ ಉತ್ಪಾದನೆ ಹೆಚ್ಚಳ: ರೈತರಿಗೆ ನವೀನ ಕೃಷಿ ತಂತ್ರಜ್ಞಾನ ಹಾಗೂ ಗುಣಮಟ್ಟದ ಬೀಜ, ರಸಗೊಬ್ಬರ ಹಾಗೂ ಯಂತ್ರೋಪಕರಣಗಳ ಸೌಲಭ್ಯ.

ನೀರಾವರಿ ವಿಸ್ತರಣೆ: ನೀರಿನ ನಿರ್ವಹಣೆ, ತೊಟ್ಟು ನೀರಾವರಿ ವ್ಯವಸ್ಥೆ ಹಾಗೂ ಮಳೆಯಾದ ನಂತರದ ನೀರಿನ ಸಂಗ್ರಹಣೆಗಾಗಿ ಪೈಪ್‌ಲೈನ್‌ ಯೋಜನೆ.

ಹಣಕಾಸು ಸಹಾಯ: ಅಲ್ಪಾವಧಿ ಹಾಗೂ ದೀರ್ಘಾವಧಿಯ ಸಾಲ ಸೌಲಭ್ಯ, ಸಹಕಾರಿ ಬ್ಯಾಂಕ್‌ಗಳ ಮೂಲಕ ಸುಲಭ ಸಾಲ ಪ್ರಾಪ್ತಿಗೆ ವ್ಯವಸ್ಥೆ.

ದಾಸ್ತಾನು ಮತ್ತು ಸಂಗ್ರಹಣಾ ಘಟಕಗಳು: ಪ್ರತಿ ಪಂಚಾಯತ್ ಹಾಗೂ ಬ್ಲಾಕ್‌ ಕೇಂದ್ರಗಳಲ್ಲಿ ಶೇಖರಣಾ ಕಟ್ಟಡಗಳು ಮತ್ತು ಶೀತಲಗೃಹಗಳ ನಿರ್ಮಾಣ.

ಮಾರುಕಟ್ಟೆ ಸಂಪರ್ಕ: ರೈತರು ನೇರವಾಗಿ ಮಾರುಕಟ್ಟೆಗೆ ತಲುಪಲು ಡಿಜಿಟಲ್ ಪ್ಲಾಟ್‌ಫಾರ್ಮ್ ಹಾಗೂ ಟ್ರೇಡಿಂಗ್‌ ಸೌಲಭ್ಯಗಳು.

ಈ ಯೋಜನೆಯಿಂದ ಮಧ್ಯವರ್ತಿಗಳ ಅವಲಂಬನೆ ಕಡಿಮೆಯಾಗಲಿದೆ. ರೈತರಿಗೆ ನೇರ ಮಾರುಕಟ್ಟೆ ಮತ್ತು ಸಂಗ್ರಹಣಾ ಸೌಲಭ್ಯ ಒದಗಲಿದೆ. ಹಾವೇರಿ ಮತ್ತು ಗದಗ ಜಿಲ್ಲೆಗಳ ರೈತರಿಗೆ ಇದು ಕೃಷಿ ಕ್ರಾಂತಿಯ ಪ್ರಾರಂಭವಾಗಿದೆ.

ಪ್ರಧಾನ ಮಂತ್ರಿ ಧನ್ ಧಾನ್ಯ ಕೃಷಿ ಯೋಜನೆ ಭಾರತದ ಕೃಷಿ ಕ್ಷೇತ್ರದ ದೀರ್ಘಾವಧಿಯ ದೃಷ್ಟಿಯ ಭಾಗವಾಗಿದೆ. ಇದರಲ್ಲಿ ಕೃಷಿ ಮೂಲಸೌಕರ್ಯ ನಿರ್ಮಾಣ, ರೈತರ ಆದಾಯದ ದ್ವಿಗುಣೀಕರಣ ಮತ್ತು ಸ್ಥಳೀಯ ಮಾರುಕಟ್ಟೆ ಬಲಪಡಿಸುವ ಉದ್ದೇಶಗಳಿವೆ. ಒಟ್ಟಾರೆ, ಹಾವೇರಿ ಮತ್ತು ಗದಗ ಜಿಲ್ಲೆಗಳು ಈ ಯೋಜನೆಯಿಂದ ಬಹುಮುಖ್ಯ ಪ್ರಯೋಜನ ಪಡೆಯಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಕೃಷಿ ಕ್ಷೇತ್ರದಲ್ಲಿ ಸ್ಪಷ್ಟ ಬದಲಾವಣೆ ಕಾಣುವ ನಿರೀಕ್ಷೆ ಇದೆ.

NO COMMENTS

LEAVE A REPLY

Please enter your comment!
Please enter your name here

Exit mobile version