ಹಾವೇರಿ: ಕೊಬ್ಬರಿ ಹೋರಿ ತಿವಿತಕ್ಕೆ ಮತ್ತೊಬ್ಬ ವ್ಯಕ್ತಿ ಶ್ರೀಕಾಂತ ಗುರುಶಾಂತಪ್ಪ ಮೃತಪಟ್ಟಿರುವ ಘಟನೆ ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ನಡೆದಿದ್ದು ಮೃತಪಟ್ಟವರ ಸಂಖೆ ನಾಲ್ಕಕೆರಿದೆ.
ದೀಪಾವಳಿ ಹಬ್ಬದ ಪ್ರಯುಕ್ತ ನಡೆದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಮೂವರು ಬಲಿಯಾಗಿದ್ದರು. ಮೃತರನ್ನು ಚಂದ್ರಶೇಖರ ಕೋಡಿಹಳ್ಳಿ (70), ಗನಿಸಾಬ್ ಬಂಕಾಪುರ (70) ಹಾಗೂ ಭರತ್ (22) ಗ್ರಾಮದ ಶ್ರೀಕಾಂತ ಗುರುಶಾಂತಪ್ಪ ಕೋಣಕೇರಿ (36) ಎಂದು ಗುರುತಿಸಲಾಗಿದೆ.
ದೀಪಾವಳಿ ಪಾಡ್ಯದ ನಿಮಿತ್ತ ಯಳವಟ್ಟಿ ಗ್ರಾಮದ ಜನರು ಹೋರಿಗಳನ್ನು ತಮ್ಮ ಮನೆಯಿಂದ ತೆಗೆದುಕೊಂಡು ಬಂದು ಗ್ರಾಮದ ನಡು ಬೀದಿಯಲ್ಲಿ ಓಡಿಸಿ ಮನೆಗೆ ಹೋರಿಗಳನ್ನು ತೆಗೆದುಕೊಂಡು ಹೋಗುವುದನ್ನು ಮೊದಲಿನಿಂದಲೂ ನಡೆಸಿಕೊಂಡು ಬಂದಿದ್ದಾರೆ. ಈ ಸಂದರ್ಭದಲ್ಲಿ ಮೃತ ಶ್ರೀಕಾಂತ ಕೋಣಕೇರಿ ಸಹ ಸರಿಯಾದ ರೀತಿಯಲ್ಲಿ ತನ್ನ ಎತ್ತುಗಳನ್ನು ಹಿಡಿದುಕೊಳ್ಳದೇ ಕೇಕೆ ಹಾಕುತ್ತಾ ನಿರ್ಲಕ್ಷತನದಿಂದ ವರ್ತಿಸಿದ್ದು, ಇದೇ ವೇಳೆ ಎತ್ತುಗಳು ಅತ್ತಿಂದಿತ್ತ ಓಡಾಟದ ಭರದಲ್ಲಿ ಆತನ ಎದೆಗೆ ಕೋಡುಗಳಿಂದ ತಿವಿದಿವೆ.
ಆಗ ಶ್ರೀಕಾಂತ ತಲೆಯನ್ನು ಹಚ್ಚಿ ಕೆಳಗಡೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ, ಕೂಡಲೇ ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಗುರುವಾರ ಆತ ಮೃತಪಟ್ಟಿದ್ದಾನೆ. ಈ ಬಗ್ಗೆ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೀಪಾವಳಿಯ ಪಾಡ್ಯ ದಿನದಂದೇ ಹಾವೇರಿ ನಗರ, ದೇವಿಹೊಸೂರು ಹಾಗೂ ತಿಳವಳ್ಳಿಯಲ್ಲಿ ತಲಾ ಓರ್ವ ವ್ಯಕ್ತಿಗಳು ಸೇರಿ ಮೂವರು ಮೃತಪಟ್ಟಿದ್ದರು. ಯಳವಟ್ಟಿ ಅವಘಡ ಸೇರಿದರೆ ಕೊಬ್ಬರಿ ಹೋರಿ ತಿವಿತಕ್ಕೆ ನಾಲ್ವರು ಬಲಿಯಾದಂತಾಗಿದೆ.
ಕಾಲು ಮುರಿದರೂ ಗುರಿ ಮುಟ್ಟಿದ ಹೋರಿ: ಹಾನಗಲ್ ತಾಲೂಕು ಅಕ್ಕಿಆಲೂರಿನಲ್ಲಿ ನಡೆದ ಹೋರಿ ಹಬ್ಬದಲ್ಲಿ ಮನಕಲಕುವ ಘಟನೆ ನಡೆದಿದ್ದು, ರಭಸದಿಂದ ಓಡಿ ಬಂದ ಹೋರಿ ಕಾಲು ಜಾರಿ ಖಾಡದಲ್ಲಿ ಕೆಳಗೆ ಬಿದ್ದು ತಕ್ಷಣ ಸಾವರಿಸಿಕೊಂಡು ಎದ್ದು ಓಡಿ ಗುರಿ ಮುಟ್ಟಿರುವ ದೃಶ್ಯಗಳು ಮನಕಲಕುವಂತಿವೆ. ಬಳಿಕ ಹೋರಿ ಮಾಲೀಕರು, ಯುವಕರು ಹೋರಿಯನ್ನು ತಬ್ಬಿಕೊಂಡು ಕಣ್ಣೀರಿಟ್ಟಿದ್ದಾರೆ.
