ಬ್ಯಾಡಗಿ: ಕಾಡುಹಂದಿಗಳ ದಾಳಿಗೆ ಕಟಾವಿಗೆ ಬಂದ ಸುಮಾರು 50 ಎಕರೆಯಷ್ಟು ಗೋವಿನಜೋಳದ ಬೆಳೆ ನಾಶಪಡಿಸಿದ್ದು ಸ್ಥಳಕ್ಕಾಗಮಿಸಿದ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಶಿಡೇನೂರು ಗ್ರಾಮದಲ್ಲಿ ನಡೆದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಕಿರಣಕುಮಾರ ಗಡಿಗೋಳ, ಕಾಡು ಪ್ರಾಣಿಗಳ ಹಾವಳಿಗೆ ರೈತರ ಬೆಳೆಗಳನ್ನು ಕಳೆದುಕೊಂಡು ಹೈರಾಣಾಗುತ್ತಿರುವ ವಿಷಯ ಹೊಸದೇನಲ್ಲ. ಕೃಷ್ಣಮೃಗ, ಚಿರತೆ, ಸೈನಿಕ ಹುಳು ಸೇರಿದಂತೆ ಇನ್ನಿತರೆ ಜೀವ ಸಂಕುಲಗಳ ಕಾಟಕ್ಕೆ ರೈತರು ಕೃಷಿಯನ್ನೇ ಬಿಟ್ಟು ಹೋಗುತ್ತಿರುವ ಪ್ರಕರಣಗಳು ನಿತ್ಯ ಒಂದಿಲ್ಲೊಂದು ಕಡೆ ನಡೆಯುತ್ತಿರುತ್ತವೆ. ಆದರೆ ಇದೀಗ ಹೊಸ ಪ್ರಾಣಿಯೊಂದು ಸೃಷ್ಟಿಯಾಗಿದ್ದು ಕಾಡು ಹಂದಿಗಳ ದಾಳಿಗೆ ಸುಮಾರು 50 ಎಕರೆಯಷ್ಟು ಗೋವಿನಜೋಳ ನಾಶವಾಗಿದ್ದು ಕೂಡಲೇ ಹಂದಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ಅರಣ್ಯ ಪ್ರದೇಶದಲ್ಲಿರುವ ಪ್ರಾಣಿಗಳಿಂದ ರೈತರ ಜೀವಗಳು ಸೇರಿದಂತೆ ಬೆಳೆಗಳನ್ನು ಸಂರಕ್ಷಿಸುವ ವಿಷಯದಲ್ಲಿ ಸರ್ಕಾರ ಹಾಗೂ ಅರಣ್ಯ ಇಲಾಖೆ ನಿರ್ಲಕ್ಷ್ಯ ತೋರಿದೆ. ಇದರಿಂದ ರೈತರು ಬೆಳೆದಂತಹ ಬೆಳೆಯನ್ನು ಸಂರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಲೂಕಿನ ವಿವಿಧೆಡೆ ಚಿರತೆಗಳ ದಾಳಿ ಸೇರಿದಂತೆ ಇತ್ತೀಚೆಗೆ ಕಾಡು ಹಂದಿಗಳ ದಾಳಿಗಳು ಪ್ರಾರಂಭವಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದಿದ್ದರೂ ಸಹ ಈವರೆಗೂ ಯಾವುದೇ ಕ್ರಮಕೈಗೊಂಡಿಲ್ಲ.
ಕಾಡುಹಂದಿಗಳ ಕಾಟ ತಪ್ಪಿಸಿ: ಕಾಡು ಪ್ರಾಣಿಗಳ ದಾಳಿಗೆ ತುತ್ತಾಗುವ ರೈತರಿಗೆ ಸರ್ಕಾರ ಪ್ರತಿ ಹೆಕ್ಟೇರ್‌ಗೆ ಕೇವಲ ರೂ. 2250 ಪರಿಹಾರ ನೀಡುತ್ತಿದೆ. ಇದರಿಂದ ಸಂತ್ರಸ್ತ ರೈತರನ್ನು ಆರ್ಥಿಕ ಸಂಕಷ್ಟದಿಂದ ಹೊರತರಲು ಸಾಧ್ಯವಿಲ್ಲ. ಕೂಡಲೇ ಇವೆಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮೊದಲು ಕಾಡು ಹಂದಿಗಳ ಬಂಧಿಸುವ ಕೆಲಸವಾಗಬೇಕು. ಇಲ್ಲದೇ ಹೋದಲ್ಲಿ ಅರಣ್ಯ ಇಲಾಖೆ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕೃಷಿ ನಡೆಸುವುದೂ ದುಸ್ತರ: ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕೃಷಿ ನಡೆಸುವುದಂತೂ ದುಸ್ತರವಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ಹತ್ತು ಹಲವು ಬಾರಿ ಮನವಿ ಕೊಟ್ಟು ಸಾಕಾಗಿದೆ. ಕಾಡು ಹಂದಿಗಳು ಬಲವಾದ 2 ಕೋರೆ ಹೊಂದಿರುತ್ತದೆ. ಒಂದು ವೇಳೆ ದಾಳಿ ನಡೆಸಿದಲ್ಲಿ ರೈತರು ಜೀವ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಜೀವಭಯಕ್ಕೆ ರೈತರು ಮೈಮರೆತು ಕೃಷಿ ನಡೆಸುವಂತಿಲ್ಲ. ಕೂಡಲೇ ಹಂದಿಗಳನ್ನು ಬಂಧಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಮಾತನಾಡಿ, “ಗುಡ್ಡಗಾಡು ಪ್ರದೇಶಕ್ಕೆ ಹತ್ತಿರವಿರುವ ರೈತರ ಹಿತಾಸಕ್ತಿಯನ್ನಿಟ್ಟುಕೊಂಡು ನಿಮ್ಮ ಪ್ರಾಣಿಗಳನ್ನು ನೀವೇ ಕಾಯ್ದುಕೊಂಡರೆ ಸಾಕು. ನಿಮ್ಮ ಪರಿಹಾರ ನಮಗೆ ಬೇಡವೆಂದು ಕಳೆದ ಹಲವು ವರ್ಷಗಳಿಂದ ರೈತ ಸಂಘವು ಆಗ್ರಹಿಸುತ್ತ ಬಂದಿದೆ. ಈಗ ಕಾಡುಹಂದಿ ಹೊಲಕ್ಕೆ ನುಗ್ಗಿದ್ದು ಫಸಲಿಗೆ ಬಂದ ಗೋವಿನಜೋಳ ನಾಶಪಡಿಸಿದ್ದು ಪ್ರತಿ ಹೆಕ್ಟೇರ್‌ಗೆ 1 ಲಕ್ಷ ಪರಿಹಾರ ಕೊಡಿ” ಎಂದು ಆಗ್ರಹಿಸಿದ್ದಾರೆ.