Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ-ಧಾರವಾಡ ಗಣೇಶೋತ್ಸವ: ಪೊಲೀಸ್‌ ಕಮಿಷನರ್‌ ಹೇಳಿದ್ದೇನು?

ಹುಬ್ಬಳ್ಳಿ-ಧಾರವಾಡ ಗಣೇಶೋತ್ಸವ: ಪೊಲೀಸ್‌ ಕಮಿಷನರ್‌ ಹೇಳಿದ್ದೇನು?

0

ಹುಬ್ಬಳ್ಳಿ: ಅವಳಿನಗರದ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ 980 ಸಾರ್ವಜನಿಕ ಗಣೇಶಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ. ಹಬ್ಬವನ್ನು ಶಾಂತಿ, ಸಂಭ್ರಮದಿಂದ ಆಚರಿಸುವ ನಿಟ್ಟಿನಲ್ಲಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು‌ ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗಣೇಶೋತ್ಸವ ಹಿನ್ನೆಲೆಯಲ್ಲಿ ಈಗಾಗಲೇ ಅವಳಿನಗರದಲ್ಲಿ ಆಯೋಜಕರು, ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಆಯೋಜಕರು ಕೆಲವೊಂದು ಬೇಡಿಕೆ ಬಗ್ಗೆ ತಿಳಿಸಿದ್ದಾರೆ. ಗಣೇಶ ಮೆರವಣಿಗೆ ಮಾರ್ಗದ ರಸ್ತೆ ತಗ್ಗು ಗುಂಡಿ ಮುಚ್ಚಲು, ವಿದ್ಯುತ್ ಸಂಪರ್ಕ ಕೇಬಲ್ ತೆರವು ಅಥವಾ ಸುರಕ್ಷತಾ ಕ್ರಮಕ್ಕೆ ಹೆಸ್ಕಾಂನವರಿಗೆ ತಿಳಿಸಲಾಗಿದೆ ಎಂದರು.

ಪಾಲಿಕೆಯಿಂದ ಗಣೇಶ ವಿಸರ್ಜನೆಗೆ ಹೆಚ್ಚಿನ ಸ್ಥಳ ಮಾಡಲು ಬೇಡಿಕೆ ಬಂದಿದೆ. ಪಾಲಿಕೆಯವರು ಕ್ರಮ ಕೈಗೊಳ್ಳುತ್ತಿದ್ದಾರೆ. ಯಾವುದೇ ಅವಘಡಗಳು ನಡೆಯದಂತೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ. ಇಲಾಖೆಯಿಂದ ಎರಡು ಸಾವಿರಕ್ಕೂ ಹೆಚ್ಚಿನ ಅಧಿಕಾರಿಗಳು, ಸಿಬ್ಬಂದಿ ನೇಮಕ ಮಾಡಲಾಗಿದೆ. ವಿಸರ್ಜನೆ ಸಂದರ್ಭದಲ್ಲಿ ಅಗತ್ಯದ ಸಂದರ್ಭದಲ್ಲಿ ಕೆಎಸ್‌ಆರ್‌ಪಿ ಸೇರಿದಂತೆ ಹೊರ ಜಿಲ್ಲೆ, ಬೆಂಗಳೂರು ಸೇರಿದಂತೆ ಹೆಚ್ಚುವರಿ ಸಿಬ್ಬಂದಿ ಕೇಳಿದ್ದೇವೆ ಎಂದರು.

ಗಣೇಶೋತ್ಸವ ಮೆರವಣಿಗೆ ಮಾರ್ಗ ಸೇರಿದಂತೆ ಎಲ್ಲ ಕಡೆ 30 ಸಾವಿರಕ್ಕೂ ಹೆಚ್ಚು ಸಿಸಿ ಕ್ಯಾಮೆರಾಗಳು ಇವೆ. ಮೆರವಣಿಗೆ ಮಾರ್ಗದಲ್ಲಿ 6 ಸಾವಿರ ಸಿಸಿಟಿವಿ ಕಾರ್ಯ ಮಾಡಲಿವೆ. ಮಹಿಳೆಯರಿಗೆ, ಮಕ್ಕಳಿಗೆ, ಹಿರಿಯರಿಗೆ ತೊಂದರೆಯಾಗದಂತೆ 18 ಸ್ಥಳಗಳಲ್ಲಿ ಸುರಕ್ಷತಾ ಝೋನ್ ಮಾಡಲಾಗಿದೆ. ಒತ್ತಡ, ತಳ್ಳಾಟ ತಪ್ಪಿಸಿ ರಕ್ಷಣೆ ಮಾಡಲು ಎಲ್ಲ ರೀತಿಯ ಸಿಬ್ಬಂದಿ ಅಂತಹ ಸ್ಥಳದಲ್ಲಿ ಕಾರ್ಯ ಮಾಡಲಿದ್ದಾರೆ. ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆಯಲು ಸಿಂಗಲ್ ವಿಂಡೋ ನಿರ್ಮಾಣ ಮಾಡಲಾಗಿದೆ. ಅನುಮತಿ ಕಡ್ಡಾಯವಾಗಿದೆ ಎಂದರು.

ಕಳೆದ ಬಾರಿ ಅವಳಿನಗರದಲ್ಲಿ ಯಾವುದೆ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಹೊರ ರಾಜ್ಯ ಸೇರಿದಂತೆ ವಿಸರ್ಜನೆ ಸಂದರ್ಭದಲ್ಲಿ ಬೇರೆ ಬೇರೆ ಜಿಲ್ಲೆಗಳಿಂದ ಸಾರ್ವಜನಿಕರು ಬರುವುದರಿಂದ ಎಲ್ಲ ರೀತಿಯ ನಿಗಾ ಇಡಲಾಗಿದೆ. ಇದು ಎಲ್ಲರ ಹಬ್ಬ ಹೀಗಾಗಿ ಸಾರ್ವಜನಿಕರು ಕೂಡ ಶಾಂತಿ, ಸಂಭ್ರಮದಿಂದ ಹಬ್ಬ ಆಚರಣೆ ಮಾಡಬೇಕು ಎಂದರು.

ಚನ್ನಮ್ಮ(ಈದ್ಗಾ) ಮೈದಾನದಲ್ಲಿ ಮೂರು ದಿನ ಆಚರಣೆ: ಕಿತ್ತೂರು ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಗಣೇಶ ಪ್ರತಿಷ್ಠಾಪನೆಗೆ ಪಾಲಿಕೆಯಿಂದ ಮೂರು ದಿನ ಅವಕಾಶ ನೀಡಲಾಗಿದೆ. ಇಲ್ಲಿ ಪ್ರತಿಷ್ಠಾಪನೆ ಮಾಡುವ ಗಣೇಶ ಮಂಡಳಿಯವರು ಡಿಜೆ ಬಳಸದೇ ಆಚರಣೆ ಮಾಡುವುದಾಗಿ ತಿಳಿಸಿದ್ದಾರೆ. ಇದನ್ನು ನಾವು ಸ್ವಾಗತಿಸಿದ್ದೇವೆ. ಇದನ್ನು ವಿವಿಧ ಮಂಡಳಿಗಳು ಅನುಸರಿಸಿದರೆ ಉತ್ತಮ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

ಇದರ ಜೊತೆಗೆ ಈದ್ ಮಿಲಾದ್ ಹಬ್ಬದಂದು ಡಿಜೆಗೆ ಅವಕಾಶ ಕೊಡಬಾರದು ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಮನವಿ ಮಾಡಿದೆ. ಇದೊಂದು ಒಳ್ಳೆಯ ಬೆಳವಣಿಗೆ ಎಂದರು. ಫ್ಲೈ ಓವರ್ ಕಾಮಗಾರಿ ಹಿನ್ನೆಲೆ ಗಣೇಶ ವಿಸರ್ಜನೆಗೆ ಅನಾನುಕೂಲ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ಹಾಗೂ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಂಡು ತಿಳಿಸಲಾಗುವುದು.

ರಾತ್ರಿ 10 ಗಂಟೆಗೆ ಡಿಜೆ ಬಂದ್: “ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ಬಳಕೆಗೆ ಸಮಯ ಹೆಚ್ಚು ನೀಡಬೇಕು ಎಂದು ಹಲವರು ಮನವಿ ಮಾಡಿದ್ದರು ಆದರೆ, ಸುಪ್ರೀಂ ಕೋರ್ಟ್‌ ಸೂಚನೆ ಮೇರೆಗೆ ರಾತ್ರಿ 10 ಗಂಟೆಯವರೆಗೆ ಡಿಜೆ ಬಳಕೆ ಅವಕಾಶ ನೀಡಲಾಗುವುದು. ಇದನ್ನು ಮೀರಿ ಡಿಜೆ ಬಳಕೆ ಮಾಡಿದರೆ, ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version