ಧಾರವಾಡ: ರಾಜ್ಯದ ಸರ್ಕಾರಿ ಶಾಲೆಗಳು, ಕಾಲೇಜುಗಳು ಹಾಗೂ ಸಾರ್ವಜನಿಕ ಜಾಗಗಳಲ್ಲಿ ಯಾವುದೇ ಸಂಘ–ಸಂಸ್ಥೆಗಳು ಕಾರ್ಯಕ್ರಮಗಳನ್ನಾಡಲು ಸರ್ಕಾರದಿಂದಲೇ ಮುಂಚಿತ ಪರವಾನಿಗೆ ಪಡೆಯಬೇಕು ಎಂಬ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ಮತ್ತೆ ಮುಂದುವರಿಕೆಯಾಗಿದೆ.
ಇಂದು ಅರ್ಜಿಯ ವಿಚಾರಣೆಯನ್ನು ಮತ್ತೆ ಕೈಗೆತ್ತಿಕೊಂಡ ಹೈಕೋರ್ಟ್ ಏಕಸದಸ್ಯ ಪೀಠವು, ಮಧ್ಯಂತರ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲ ಕಾಲಾವಕಾಶ ನೀಡಿ ಪ್ರಕರಣದ ವಿಚಾರಣೆಯನ್ನು ಡಿ.15ಕ್ಕೆ ಮತ್ತೆ ಮುಂದೂಡಿದೆ. ಅಲ್ಲಿಯವರೆಗೂ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ಮುಂದುವರೆಯಲಿದೆ.
ಈ ಆದೇಶವನ್ನು ಪ್ರಶ್ನಿಸಿ ಪುನಶ್ಚತನ ಸಂಸ್ಥೆ ಸೇರಿದಂತೆ ಮೂವರು ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಹೈಕೋರ್ಟ್ ಏಕಸದಸ್ಯ ಪೀಠ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರು ಇಂದು ವಿಚಾರಣೆ ಕೈಗೆತ್ತಿಕೊಂಡರು.
ಏನಿತ್ತು ಸರ್ಕಾರದ ಆದೇಶ?: ರಾಜ್ಯ ಸರ್ಕಾರವು ಕೆಲವು ಸಂಘಟನೆಗಳು ಸರ್ಕಾರಿ ಆವರಣದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಅಶಾಂತಿ, ಅನಾವಶ್ಯಕ ರಾಜಕೀಯೀಕರಣ ಮತ್ತು ವಿವಾದಗಳ ಸಾಧ್ಯತೆ ಇದೆ ಎಂದು ಹೇಳಿ, ಸರ್ಕಾರಿ ಆವರಣದಲ್ಲಿ ಯಾವುದೇ ಕಾರ್ಯಕ್ರಮವನ್ನು ನಡೆಸಲು ಮೊದಲು ಸರ್ಕಾರದಿಂದ ಪರವಾನಿಗೆ ಕಡ್ಡಾಯ ಎಂದು ಆದೇಶ ಹೊರಡಿಸಿತ್ತು. ಈ ಆದೇಶ ರಾಜ್ಯಾದ್ಯಂತ ವಿರೋಧಕ್ಕೆ ಗುರಿಯಾಗಿತ್ತು.
ಅರ್ಜಿದಾರರ ವಾದ: ಅರ್ಜಿದಾರರು ಈ ಸರ್ಕಾರದ ಆದೇಶ ನಾಗರಿಕರ ಮೂಲಭೂತ ಹಕ್ಕಿನ ಉಲ್ಲಂಘನೆ, ವಿಶೇಷವಾಗಿ ಸಮ್ಮೇಳನ, ಸಭೆ ಮತ್ತು ಅಭಿವ್ಯಕ್ತಿಯ ಸ್ವಾತಂತ್ರ್ಯಕ್ಕೆ ವಿರುದ್ಧ ಎಂದು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಕಳೆದ ವಾರ ಮಧ್ಯಂತರ ತಡೆಯಾಜ್ಞೆ ನೀಡಿತ್ತು.
ಇಂದು ಹೈಕೋರ್ಟ್ ನೀಡಿದ ಮಹತ್ವದ ನಿರ್ದೇಶನ: ಇಂದು ವಿಚಾರಣೆ ವೇಳೆ ಪೀಠವು ರಾಜ್ಯ ಸರ್ಕಾರದ ಪರ ವಕೀಲರಾದ ಅಟಾರ್ನಿ ಜನರಲ್ ಶಶಿಕಿರಣ್ ಶೆಟ್ಟಿ ಅವರಿಗೆ ಮಧ್ಯಂತರ ಆದೇಶಕ್ಕೆ ಆಕ್ಷೇಪಣೆ ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದೆ. ಈ ಮದ್ಯಂತರದಲ್ಲಿ ಸರ್ಕಾರದ ಆದೇಶ ಜಾರಿಗೊಳ್ಳುವುದಿಲ್ಲ. ತಡೆಯಾಜ್ಞೆ ಯಥಾಸ್ಥಿತಿಯಲ್ಲಿ ಮುಂದುವರಿಯುತ್ತದೆ
ಸುಪ್ರೀಂ ಕೋರ್ಟ್ ಪ್ರಶ್ನೆ: ವಿಚಾರಣೆಯ ವೇಳೆ ಹೈಕೋರ್ಟ್ ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ್ದು “ದ್ವಿಸದಸ್ಯ ಪೀಠದಲ್ಲಿ ಅರ್ಜಿ ವಜಾ ಆಗಿದ್ದಾಗ ಏಕೆ ಸುಪ್ರೀಂ ಕೋರ್ಟ್‌ಗೆ ಹೋಗಲಿಲ್ಲ?” ಇದಕ್ಕೆ ಎಜಿ ಅವರು – “ಇನ್ನೂ ಸುಪ್ರೀಂ ಕೋರ್ಟ್‌ಗೆ ಹೋಗುವ ಬಗ್ಗೆ ನಿರ್ಧಾರ ಮಾಡಿಲ್ಲ” ಎಂದು ಮಾಹಿತಿ ನೀಡಿದರು.
ಮುಂದಿನ ವಿಚಾರಣೆ: ಡಿಸೆಂಬರ್ 15 ರಂದು ಮುಂದಿನ ವಿಚಾರಣೆ ಅಲ್ಲಿ ಸರ್ಕಾರ ತನ್ನ ಪ್ರತಿವಾದ ಸಲ್ಲಿಸಬೇಕು. ಅಷ್ಟರವರೆಗೆ ಮಧ್ಯಂತರ ತಡೆ ಮುಂದುವರಿಯುತ್ತದೆ.
