ಧಾರವಾಡ: ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರಿಗೆ ಧಾರವಾಡ ಜಿಲ್ಲೆಗೆ ಜನವರಿವರೆಗೆ ಪ್ರವೇಶ ನಿರ್ಬಂಧ ವಿಧಿಸುವಂತೆ ಜಿಲ್ಲಾಡಳಿತ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ತೀರ್ಪು ಕಾಯ್ದಿರಿಸಿದೆ.
ಕಳೆದ ಕೆಲವು ವಾರಗಳಿಂದ ಸ್ವಾಮೀಜಿಯವರ ಭೇಟಿ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳನ್ನು ಉದ್ದೇಶಿಸಿ ಜಿಲ್ಲಾಡಳಿತ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆಯ ಕಾರಣಗಳನ್ನು ಉಲ್ಲೇಖಿಸಿ ಜಿಲ್ಲೆಗೆ ಪ್ರವೇಶ ಮಾಡದಂತೆ ನಿರ್ಬಂಧ ಹೇರಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಸ್ವಾಮೀಜಿಯವರ ಪರ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಸ್ವಾಮೀಜಿ ಪರ ವಾದದಲ್ಲಿ ಈ ನಿರ್ಬಂಧ ಅನಗತ್ಯ ಮತ್ತು ಅಸಂವಿಧಾನಿಕ ಎಂದು ಹೇಳಲಾಗಿತ್ತು, ಯಾವುದೇ ಗಂಭೀರ ಕಾನೂನು ಸುವ್ಯವಸ್ಥೆ ಸಮಸ್ಯೆ ಇಲ್ಲದೆ ನಿರ್ಬಂಧ ವಿಧಿಸಲಾಗಿದೆ. ಧಾರ್ಮಿಕ ವ್ಯಕ್ತಿಯ ಹಕ್ಕು ಕಸಿಯಲಾಗಿದೆ ಎಂದು ವಾದ ಮಂಡಿಸಲಾಯಿತು.
ಜಿಲ್ಲಾಡಳಿತದ ಪರ ವಾದ ಮಂಡಿಸಿದ ವಕೀಲರು, ಹಿಂದಿನ ಕಾರ್ಯಕ್ರಮಗಳಲ್ಲಿ ಸ್ವಾಮೀಜಿಯವರು ಮಾತನಾಡಿದ್ದರಿಂದ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಿರುವ ಉದಾಹರಣೆ ಇವೆ. ಅದರ ಹಿನ್ನೆಲೆಯಲ್ಲಿ ಮುಂಚಿತ ಮುನ್ನೆಚ್ಚರಿಕೆಯಾಗಿ ನಿರ್ಬಂಧ ಜಾರಿಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಯಿತು. ವಾದ ವಿವಾದ ಆಲಿಸಿದ ಏಕಸದಸ್ಯ ಪೀಠದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಪೀಠವು ತೀರ್ಪನ್ನು ಕಾಯ್ದಿರಿಸಿದೆ.
