ಹುಬ್ಬಳ್ಳಿ: ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳು ಭಾರತದಿಂದ ವಿಭಜನೆಯಾಗಲು ಮಾಜಿ ಪ್ರಧಾನಿ ದಿ. ಜವಾಹರಲಾಲ್ ನೆಹರು ಅವರೇ ಕಾರಣ ಎಂದು ದೂಷಿಸುವ ಬಿಜೆಪಿ ನಾಯಕರು, ಇಂದು ದೇಶದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆ ಅಸ್ತಿತ್ವದಲ್ಲಿರಲು ನೆಹರೂ ಅವರೇ ಕಾರಣ ಎಂಬುದನ್ನು ಮರೆಯಬಾರದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಮಾಜಿ ಪ್ರಧಾನಿ ದಿ. ಇಂದಿರಾ ಗಾಂಧಿ ಅವರ ಜನ್ಮದಿನದ ಅಂಗವಾಗಿ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜವಾಹರಲಾಲ್ ನೆಹರು ಅವರು ಪಾಕಿಸ್ತಾನ ಮತ್ತು ಬಾಂಗ್ಲಾ ದೇಶವನ್ನು ಭಾರತದಿಂದ ವಿಭಜಿಸದಿದ್ದರೆ ಪಾಕಿಸ್ತಾನದಲ್ಲಿನ 25 ಕೋಟಿ ಮುಸ್ಲಿಮರು ಹಾಗೂ ಬಾಂಗ್ಲಾ ದೇಶದ 17 ಕೋಟಿ ಮುಸ್ಲಿಂ ಪ್ರಜೆಗಳು ಭಾರತದಲ್ಲೇ ಉಳಿದುಕೊಳುತ್ತಿದ್ದರು. ಆಗ ಬಿಜೆಪಿ ಅಸ್ತಿತ್ವ ಇರುತ್ತಿತ್ತೇ? ಆರ್‌ಎಸ್‌ಎಸ್ ಸಂಘಟನೆ ಸ್ಥಾಪನೆ ಆಗುತ್ತಿತ್ತೇ ಎಂದು ಪ್ರಶ್ನಿಸಿದರು. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ತಮ್ಮ ತಮ್ಮ ಮನೆಗಳಲ್ಲಿ ಜವಾಹರಲಾಲ್ ನೆಹರು ಅವರ ಭಾವಚಿತ್ರ ಹಾಕಿಕೊಂಡು ಅವರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದರು.
ಭಾರತ ದೇಶದ ಎಲ್ಲ ಸಮುದಾಯದವರೂ ಸಮಾನರಾಗಿ ಬಾಳಬೇಕು ಎಂಬ ಕಾರಣಕ್ಕೆ ಇಂದಿರಾ ಗಾಂಧಿ ಅವರು `ಊಳುವವನೇ ಒಡೆಯ’ ಕಾಯ್ದೆಯನ್ನು ಜಾರಿಗೆ ತಂದರು. ಅದರಿಂದಾಗಿ ಕೋಟ್ಯಂತರ ಜನ ಉಳುಮೆ ಮಾಡಿಕೊಂಡು ಇಂದಿಗೂ ಜೀವನ ಸಾಗಿಸುತ್ತಿದ್ದಾರೆ. ಕೇವಲ ಬಂಡವಾಳ ಶಾಹಿಗಳ ಮತ್ತು ಶ್ರೀಮಂತರಿಗೆ ಸಾಲ ಸೌಲಭ್ಯ ಇದ್ದ ಕಾಲಘಟ್ಟದಲ್ಲಿ ಹೆಚ್ಚಿನ ಬಡ್ಡಿಗೆ ಹಣ ನೀಡುತ್ತಿದ್ದ ಲೇವಾದೇವಿಗಾರರಿಂದಲೇ ಜೀತ ಪದ್ಧತಿ ಹೆಚ್ಚುತ್ತಿದೆ ಎಂದರಿತ ಇಂದಿರಾ ಗಾಂಧಿಯವರು, ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದರು. ಅದರಿಂದ ಬಡ, ಮಧ್ಯಮ ವರ್ಗದವರಿಗೆ ಅತೀ ಕಡಿಮೆ ಬಡ್ಡಿದರಕ್ಕೆ ಸಾಲ ಸೌಲಭ್ಯ ದೊರೆಯುವಂತಾಗಿದ್ದು, ಜೀತ ಪದ್ಧತಿ ಸಂಪೂರ್ಣ ನಿರ್ನಾಮವಾಗಿದೆ ಎಂದು ವಿವರಿಸಿದರು.
