Home ನಮ್ಮ ಜಿಲ್ಲೆ ಧಾರವಾಡ ಹುಬ್ಬಳ್ಳಿ: ಎನ್‌ಇಪಿ’ ಅಳವಡಿಸಿಕೊಳ್ಳದಿದ್ದರೆ ಭವಿಷ್ಯ ಡೋಲಾಯಮಾನ’

ಹುಬ್ಬಳ್ಳಿ: ಎನ್‌ಇಪಿ’ ಅಳವಡಿಸಿಕೊಳ್ಳದಿದ್ದರೆ ಭವಿಷ್ಯ ಡೋಲಾಯಮಾನ’

0

ಹುಬ್ಬಳ್ಳಿ: ಭವ್ಯ ಭಾರತದ ಪೀಳಿಗೆಗೆ ಸುಭದ್ರ ಅಡಿಪಾಯ ಹಾಕಿಕೊಡುವಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಮಹತ್ವದ ಪಾತ್ರ ವಹಿಸಲಿದೆ. ಎನ್‌ಇಪಿ ಅಳವಡಿಸಿಕೊಳ್ಳದ ರಾಜ್ಯಗಳ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗುತ್ತದೆ. ಬಳಿಕ ಪಶ್ಚಾತಾಪ ಪಟ್ಟರೇನು ಪ್ರಯೋಜನ? ಈಗಲೇ ಎಚ್ಚೆತ್ತುಕೊಳ್ಳಬೇಕು ಎಂದು ಕಲಬುರ್ಗಿಯ ಕೇಂದ್ರೀಯ ವಿವಿಯ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಎಚ್ಚರಿಸಿದರು.

ಕರ್ನಾಟಕ ಮಹಾವಿದ್ಯಾಲಯ ಶಿಕ್ಷಕ ಸಂಘವು ಪ್ರೇರಣಾ ದಿವಸ ಆಚರಣೆ ಪ್ರಯುಕ್ತ ಆಯೋಜಿಸಿದ `ರಾಷ್ಟ್ರೀಯ ಶಿಕ್ಷಣ ನೀತಿ-2020 ಐದು ವರ್ಷದ ಹೆಜ್ಜೆಗಳು’ ಎಂಬ ವಿಷಯ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿಕಸಿತ ಭಾರತ ಕನಸು ಸಾಕಾರಕ್ಕೆ, ವಿದ್ಯಾರ್ಥಿಗಳಲ್ಲಿ ಕೌಶಲಾಧಾರಿತ ಜ್ಞಾನ ಕಲ್ಪಿಸಿ ನಿರುದ್ಯೋಗ ಹೋಗಲಾಡಿಸಲು ಎನ್‌ಇಪಿ ಸಹಕಾರಿಯಾಗಿದೆ ಎಂದು ಪ್ರತಿಪಾದಿಸಿದರು.

ಎನ್‌ಇಪಿ ಬಗ್ಗೆ ಶಿಕ್ಷಕರು, ಶಿಕ್ಷಣ ತಜ್ಞರು, ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ, ಶಿಕ್ಷಣ ಇಲಾಖೆ ಉನ್ನತ ಅಧಿಕಾರಿ ವರ್ಗ, ಜನಪ್ರತಿನಿಧಿಗಳು ಸಮಗ್ರ ಅಧ್ಯಯನ ಮಾಡಬೇಕು. ಮುಖ್ಯವಾಗಿ ಶಿಕ್ಷಕ ಸಮುದಾಯ ಸಿಂಹಾವಲೋಕನ ಮಾಡಬೇಕು. ಅಂದಾಗ ಅದರ ವಿರಾಟ ದರ್ಶನವಾಗಿ ಮಹತ್ವ ತಿಳಿಯುತ್ತದೆ ಎಂದರು.

ದಿಕ್ಸೂಚಿ ಭಾಷಣ ಮಾಡಿದ ನ್ಯಾಕ್ ಸಮಿತಿ ನಿರ್ದೇಶಕ ಪ್ರೊ ಗಣೇಶನ್ ಕನ್ನಬೀರನ್, ಎನ್‌ಇಪಿ ಬರೀ ವಿಕಸಿತ ಭಾರತ ಕನಸು ಸಾಕಾರಕ್ಕೆ ಮಾತ್ರವಲ್ಲ ಈ ದೇಶದ ಶಿಕ್ಷಣ ಕ್ಷೇತ್ರದ ಸಾವಿರ ವರ್ಷದ ಭವಿಷ್ಯದ ಚಿಂತನೆಗಳನ್ನು ಒಳಗೊಂಡಿದೆ ಎಂದರು.

ಈಗಿನ ಕಾಲದ ವಿದ್ಯಾರ್ಥಿಗಳನ್ನು ನಿಭಾಯಿಸುವುದು ಬೋಧಕ ವರ್ಗಕ್ಕೆ ದೊಡ್ಡ ಸವಾಲು. ಪ್ರತಿ ಕ್ಷಣ, ಪ್ರತಿ ದಿನ ಹೊಸ ವಿಚಾರ ತಿಳಿದಿರಬೇಕು. ಬೋಧನೆ ಮಾಡುವ ವಿಷಯದ ಬಗ್ಗೆ ಅಪ್ ಡೇಟ್ ಇರಲೇಬೇಕು ಎಂದು ಹೇಳುವ ಮೂಲಕ ತಮ್ಮದೇ ಸ್ವ ಅನುಭವ ಹಂಚಿಕೊಂಡರು.

ಹಾವೇರಿ ವಿವಿಯ ಕುಲಪತಿ ಡಾ.ಸುರೇಶ ಎಚ್ ಜಂಗಮಶೆಟ್ಟಿ ಮಾತನಾಡಿ, ಎನ್‌ಇಪಿ ಇರಲಿ. ಎಸ್‌ಇಪಿ ಇರಲಿ. ಎರಡರ ಉದ್ದೇಶವೂ ಈ ದೇಶದ ವಿದ್ಯಾರ್ಥಿಗಳಿಗೆ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ ಕಲ್ಪಿಸುವುದೇ ಆಗಿದೆ. ಈ ಕಾಲದ ವಿದ್ಯಾರ್ಥಿಗಳ ಪ್ರತಿಭೆ, ಕೌಶಲ ಗುರುತಿಸಿ ಪ್ರೋತ್ಸಾಹಿಸಬೇಕು. ಅವರ ಅಧ್ಯಯನಕ್ಕೆ ಪೂರಕವಾದ ವಾತಾವರಣ ರೂಪಿಸಿಕೊಡಬೇಕು. ಈ ವಿಷಯದಲ್ಲಿ ಗೊಂದಲ ಸೃಷ್ಟಿ ಬೇಡ ಎಂದು ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version