Home ನಮ್ಮ ಜಿಲ್ಲೆ ಧಾರವಾಡ ಧಾರವಾಡದಲ್ಲಿ ಹಿಟಾಚಿ ಕಂಪನಿಯ ಘಟಕ ಸ್ಥಾಪನೆ: ಎಂ.ಬಿ. ಪಾಟೀಲ

ಧಾರವಾಡದಲ್ಲಿ ಹಿಟಾಚಿ ಕಂಪನಿಯ ಘಟಕ ಸ್ಥಾಪನೆ: ಎಂ.ಬಿ. ಪಾಟೀಲ

0

ಜಪಾನಿನ ಹಿಟಾಚಿ ಕನ್‌ಸ್ಟ್ರಕ್ಷನ್ ಮಷಿನರಿ ಕಂಪನಿಯು ಧಾರವಾಡದಲ್ಲಿ ನಿರ್ಮಾಣ ಯಂತ್ರೋಪಕರಣಗಳ ಅಭಿವೃದ್ಧಿ ಕೇಂದ್ರ ಸ್ಥಾಪಿಸಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

ಜಪಾನ್‌ಗೆ ಭೇಟಿ ನೀಡಿರುವ ಸಚಿವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಮಂಗಳವಾರ ಕಂಪನಿಯ ಉನ್ನತ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.

ಧಾರವಾಡದಲ್ಲಿ 2027ರ ವೇಳೆಗೆ ಕಾರ್ಯಾರಂಭ ಮಾಡಲಿರುವ ಈ ಕೇಂದ್ರವು, ನಿರ್ಮಾಣ ಯಂತ್ರೋಪಕರಣಗಳ ಜಾಗತಿಕ ಉತ್ಪನ್ನಗಳ ವಿನ್ಯಾಸ ರೂಪಿಸಲು ಮತ್ತು ಅಭಿವೃದ್ಧಿಪಡಿಸಲು ಆದ್ಯತೆ ನೀಡಲಿದೆ. 200 ಎಂಜಿನಿಯರ್‌ಗಳಿಗೆ ಇಲ್ಲಿ ಉದ್ಯೋಗ ಅವಕಾಶಗಳು ದೊರೆಯಲಿವೆ. ಜಾಗತಿಕ ಇತರ ತಾಣಗಳ ತೀವ್ರ ಪೈಪೋಟಿ ಮಧ್ಯೆಯೂ ಧಾರವಾಡವನ್ನು ಆಯ್ಕೆ ಮಾಡಿರುವುದು ಪ್ರಮುಖ ಮೈಲುಗಲ್ಲು ಆಗಿರುವುದರ ಜೊತೆಗೆ ಬೆಂಗಳೂರಿನ ಆಚೆಗೆ ಬಂಡವಾಳ ಹೂಡಿಕೆ ಆಕರ್ಷಿಸುವ ರಾಜ್ಯ ಸರ್ಕಾರದ ಧ್ಯೇಯಕ್ಕೆ ಪೂರಕವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ನಿಯೋಗವು ತನ್ನ ಜಪಾನ್ ಭೇಟಿಯ ಎರಡನೆ ದಿನ, ರೆನೆಸಾಸ್ ಎಲೆಕ್ಟ್ರಾನಿಕ್ಸ್, ಅಸಾಯಿ ಕಸೆಯಿ, ಹಿಟಾಚಿ ಕನ್‌ಸ್ಟ್ರಕ್ಷನ್ ಮತ್ತು ಯಮಹಾ ರೋಬೊಟಿಕ್ಸ್‌ನ ಉನ್ನತ ಅಧಿಕಾರಿಗಳ ಜೊತೆಗೆ ಸಮಾಲೋಚನೆ ನಡೆಸಿತು.

ಬೆಂಗಳೂರಿನಲ್ಲಿ ಏರ್‌ಬ್ಯಾಗ್ ಬಿಡಿಭಾಗಗಳನ್ನು ತಯಾರಿಸುವ ಘಟಕ ಸ್ಥಾಪಿಸುವುದಾಗಿ ಅಸಾಹಿ ಕಸೆಯಿ-ನ ಅಂಗಸಂಸ್ಥೆಯಾಗಿರುವ ಅಸಾಹಿ ಕಸೆಯಿ ಅಡ್ವಾನ್ಸ್ ಪ್ರಕಟಿಸಿದೆ. ಈ ಹೂಡಿಕೆ ನಿರ್ಧಾರವು ಕರ್ನಾಟಕದಲ್ಲಿ ವಾಹನ ತಯಾರಿಕಾ ವಲಯವು ಗಮನಾರ್ಹವಾಗಿ ವಿಸ್ತರಣೆಯಾಗುತ್ತಿರುವುದಕ್ಕೆ ಪೂರಕವಾಗಿದೆ.

ಈ ನಿರ್ಧಾರ ಪ್ರಕಟಿಸಿರುವುದಕ್ಕೆ ಕಂಪನಿಗೆ ರಾಜ್ಯ ಸರ್ಕಾರದ ಪರವಾಗಿ ಧನ್ಯವಾದ ಅರ್ಪಿಸಿರುವ ಎಂ.ಬಿ. ಪಾಟೀಲರು, ಟೆಕ್ಸ್‌ಟೈಲ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕೆಮಿಕಲ್ಸ್ ಕ್ಷೇತ್ರಗಳಲ್ಲಿನ ತನ್ನ ಜಾಗತಿಕ ಪರಿಣತಿಯನ್ನು ಕರ್ನಾಟಕದಲ್ಲಿಯೂ ವಿಸ್ತರಿಸಲು ಮುಂದಾಗಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಭಾರತದಲ್ಲಿ ತನ್ನ ಹೊಸ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ ಸ್ಥಾಪಿಸುವಾಗ ಮೈಸೂರು ನಗರವನ್ನು ಆದ್ಯತೆ ಮೇರೆಗೆ ಪರಿಗಣಿಸಬೇಕು ಎಂದು ರಾಜ್ಯದ ನಿಯೋಗವು ಜಪಾನಿನ ಸೆಮಿಕಂಡಕ್ಟರ್ ದೈತ್ಯ ಕಂಪನಿ ರೆನೆಸಾಸ್ ಎಲೆಕ್ಟ್ರಾನಿಕ್ಸ್‌ಗೆ ಮನವಿ ಮಾಡಿಕೊಂಡಿದೆ. ನಾವೀನ್ಯತೆ ಆಧಾರಿತ ಹೂಡಿಕೆಗೆ ಮೈಸೂರು ನಗರವು ಅತ್ಯುತ್ತಮ ತಾಣವಾಗಿರುವುದನ್ನು ಸಭೆಯಲ್ಲಿ ವಿವರಿಸಲಾಯಿತು.

ಬೆಂಗಳೂರಿನಲ್ಲಿ ತನ್ನ ತಯಾರಿಕಾ ಘಟಕ ಸ್ಥಾಪಿಸಬೇಕು ಎಂದು ನಿಯೋಗವು ಯಮಹಾ ರೋಬೊಟಿಕ್ಸ್‌ಗೆ ಮನವಿ ಮಾಡಿಕೊಂಡಿದೆ. ಇದರಿಂದ ಭಾರತದಲ್ಲಿ ಹೆಚ್ಚುತ್ತಿರುವ ಕಂಪನಿಯ ಸ್ಥಳೀಯ ಗ್ರಾಹಕರಿಗೆ ಉತ್ತಮ ಸೇವೆ ಸಲ್ಲಿಸಲು ನೆರವಾಗಲಿರುವುದನ್ನು ನಿಯೋಗವು ಮನದಟ್ಟು ಮಾಡಿಕೊಟ್ಟಿತು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ಇತರರು ಇದ್ದರು.

NO COMMENTS

LEAVE A REPLY

Please enter your comment!
Please enter your name here

Exit mobile version