ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಐಟಿಐ ವಿದ್ಯಾರ್ಥಿಗಳಿಗೆ ಸಿಹಿಸುದ್ದಿ. ಎಐ ಮೂಲಕ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಪೂರೈಸಲು ಪ್ರಾಯೋಗಿಕ ಯೋಜನೆಯನ್ನು ಧಾರವಾಡ ಜಿಲ್ಲೆಯಲ್ಲಿ ಪ್ರಥಮವಾಗಿ ಜಾರಿ ಮಾಡಲಾಗುತ್ತಿದೆ.
ಗುರುವಾರ ಬೆಳಗ್ಗೆ ಧಾರವಾಡ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಕಾರ್ಯಾಗಾರ ನಡೆಯಿತು. ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ ಮತ್ತು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ಆಯುಕ್ತರು, ಹುಬ್ಬಳ್ಳಿ ಧಾರವಾಡದಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶಗಳನ್ನು ಸುಧಾರಿಸಲು ಕೃತಕ ಬುದ್ಧಿಮತ್ತೆ (ಎಐ) ವೇದಿಕೆಯನ್ನು ಬಳಸಿಕೊಂಡು ಎಕ್ ಸ್ಟೆಪ್ ಫೌಂಡೇಶನ್‌ನೊಂದಿದೆ ಧಾರವಾಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಾ.ಈ.ವಿ.ರಮಣ ರೆಡ್ಡಿ ಮಾತನಾಡಿ, “ಕೈಗಾರಿಕಾ ವಲಯಗಳ ಸುತ್ತಮುತ್ತ 30 ಕಿಲೋಮೀಟರ್ ವ್ಯಾಪ್ತಿಯಲ್ಲಿರುವ ಉದ್ಯೋಗದಾತರಿಗೆ ಹೊಂದಿಕೆಯಾಗುವ ಪ್ರೊಫೈಲ್‌ಗಳು ಲಭ್ಯವಾದ ತಕ್ಷಣ ಐಟಿಐ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಪ್ ಮತ್ತು ಖಾಯಂ ಉದ್ಯೋಗಗಳನ್ನು ತ್ವರಿತವಾಗಿ ಮತ್ತು ಸಮಯಕ್ಕೆ ಸರಿಯಾಗಿ ಒದಗಿಸುವುದು ಈ ಪ್ರಾಯೋಗಿಕ ಕಾರ್ಯಕ್ರಮದ ಉದ್ದೇಶವಾಗಿದೆ” ಎಂದು ಹೇಳಿದರು.
ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, “ಹುಬ್ಬಳ್ಳಿ-ಧಾರವಾಡದಲ್ಲಿನ ಸರ್ಕಾರಿ ಐಟಿಐಗಳಲ್ಲಿ, ಸಂವಾದಾತ್ಮಕ ಕೃತಕ ಬುದ್ಧಿಮತ್ತೆ ಧ್ವನಿಬಾಟ್ ಬಳಸಿಕೊಂಡು, ಪ್ರಾಂಶುಪಾಲರು ಮತ್ತು ಉದ್ಯೋಗಾಧಿಕಾರಿಗಳು ಪರಿಶೀಲಿಸಿದ 1,100ಕ್ಕೂ ಹೆಚ್ಚು ಬ್ಲೂ ಡಾಟ್ (ಐಟಿಐ ಅಂತಿಮ ವರ್ಷದ ವಿದ್ಯಾರ್ಥಿಗಳ ಡಿಜಿಟಲ್ ಪ್ರೊಫೈಲ್) ರಚಿಸಲಾಗಿದೆ” ಎಂದರು.
“ಮೊಬೈಲ್ ಅಪ್ಲಿಕೇಶನ್ ಬಳಸಿ ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಪ್ರೊಫೈಲ್‌ಗಳನ್ನು ಮಾರ್ಪಡಿಸುವ ಮತ್ತು ವಿಸ್ತರಿಸುವ ಸಾಮರ್ಥ್ಯ ಹೊಂದಿದ್ದಾರೆ. 6 ಕೈಗಾರಿಕಾ ಸಂಘಗಳು ಈ ಪ್ರಾಯೋಗಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಎಂಎಸ್‍ಎಂಇಗಳು ಹೊರಡಿಸಿದ ವಿವರಣೆಯಲ್ಲಿ ನಮೂದಿಸಲಾದ ಅವಶ್ಯಕತೆಗಳ ಆಧಾರದ ಮೇಲೆ 300ಕ್ಕೂ ಹೆಚ್ಚು ವಿದ್ಯಾರ್ಥಿಗಳ ಪ್ರೊಫೈಲ್‌ಗಳನ್ನು ಹೊಂದಿಸಿ 50ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಲಾಗಿದೆ” ಎಂದು ಹೇಳಿದರು.
“ರಾಜ್ಯದಲ್ಲಿ ಬೇರೆ ವಾಣಿಜ್ಯ ನಗರಗಳನ್ನು ಬಿಟ್ಟು, ನಮ್ಮ ಧಾರವಾಡದಲ್ಲಿ ಎಐ ಮೂಲಕ ಉದ್ಯೋಗ ಕಲ್ಪಿಸುವ ಈ ಆ್ಯಪ್ ಅನ್ನು ಬಿಡುಗಡೆ ಮಾಡಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ. ಅದಾಗಿಯೂ ನಮ್ಮ ಹುಬ್ಬಳ್ಳಿ ಧಾರವಾಡ ಜಿಲ್ಲೆಯು ವಿದ್ಯಾ ನಗರಿ, ಸಂಸ್ಕೃತಿ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಇಲ್ಲಿ ಗುಣಮಟ್ಟದ ಶಿಕ್ಷಣ ಸಂಸ್ಥೆಗಳು, ಶ್ರೀಮಂತ ಸಾಂಸ್ಕೃತಿಕ ಪರಂಪರೆ ಮತ್ತು ಬಲವಾದ ವ್ಯಾಪಾರ ವಾತಾವರಣವಿದೆ” ಎಂದರು.
“ಜಿಲ್ಲೆಯ ಆರ್ಥಿಕ ಪ್ರಗತಿಗೆ ಕೈಗಾರಿಕೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವಲ್ಲಿ ಅವುಗಳ ಕೊಡುಗೆ ಅನಿವಾರ್ಯ. ವಿಶೇಷವಾಗಿ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗುವುದು. ಯುವಕರು ಉದ್ಯೋಗ ಸೃಷ್ಟಿಕರ್ತರಾಗಲು ಪ್ರೇರೇಪಿಸಲು ಸ್ಟಾರ್ಟ್‍ಅಪ್‍ಗಳಿಗೆ ಅಗತ್ಯ ಬೆಂಬಲ ಮತ್ತು ಮಾರ್ಗದರ್ಶನ ನೀಡಲಾಗುವುದು” ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
“ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಕೈಜೋಡಿಸುವಂತೆ ಅವಳಿನಗರದಲ್ಲಿ ಯುವಕರಿಗೆ ಅವರ ವಿದ್ಯಾರ್ಹತೆಗೆ ಅನುಗುಣವಾಗಿ ಉದ್ಯೋಗಗಳನ್ನು ಸೃಷ್ಟಿಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಲಪಡಿಸುವ ಅವಶ್ಯಕತೆ ಇದೆ. ಯುವ ಸಮುದಾಯಕ್ಕೆ ಸೂಕ್ತ ಕೌಶಲ್ಯ ತರಬೇತಿ ನೀಡುವುದರಿಂದ ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಬಹುದು ಮತ್ತು ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಬಹುದು” ಎಂದು ಹೇಳಿದರು.
ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತೆ ರಾಗಪ್ರೀಯಾ ಮಾತನಾಡಿ, “ರಾಜ್ಯದ ಐಟಿಐಗಳಿಂದ ಪ್ರತಿ ವರ್ಷ ಸುಮಾರು 70 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಾರೆ. ಆದರೆ ಅವರಿಗೆ ಉದ್ಯೋಗಕ್ಕೆ ಅಗತ್ಯವಿರುವ ಕೌಶಲ್ಯಗಳು ಮತ್ತು ಕೆಲಸದ ಸ್ಥಳದಲ್ಲಿ ತಾಳ್ಮೆಯಿಂದ ಕಾರ್ಯನಿರ್ವಹಿಸುವ ಸಾಮರ್ಥ್ಯದ ಕೊರತೆಯಿದೆ” ಎಂದು ತಿಳಿಸಿದರು.
ಪ್ರಾಯೋಗಿಕ ತರಬೇತಿಗೆ ಹೆಚ್ಚಿನ ಒತ್ತು ನೀಡುವುದು ಮತ್ತು ವಿದ್ಯಾರ್ಥಿಗಳಲ್ಲಿ ವೃತ್ತಿಪರ ನೀತಿ ಸಂಹಿತೆ ಹಾಗೂ ತಾಳ್ಮೆಯಂತಹ ಮೃದು ಕೌಶಲ್ಯಗಳನ್ನು ಬೆಳೆಸುವುದು ಅವಶ್ಯಕವಾಗಿದೆ. ಐಟಿಐ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಮತ್ತು ರಾಜ್ಯದ ಕೈಗಾರಿಕಾ ಬೆಳವಣಿಗಾಗಿ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಕಲ್ಪಿಸಿಕೊಟ್ಟು ಕೌಶಲ್ಯಗಳ ಬಗ್ಗೆ ಮಾಹಿತಿ ನೀಡಬೇಕಾಗಿದೆ.