Home ನಮ್ಮ ಜಿಲ್ಲೆ ಧಾರವಾಡ ಧಾರವಾಡ: ಬೆಣ್ಣಿಹಳ್ಳ ಸೇತುವೆ ದುರಸ್ಥಿಗೆ ತಜ್ಞರ ಅಭಿಪ್ರಾಯ ಸಂಗ್ರಹ

ಧಾರವಾಡ: ಬೆಣ್ಣಿಹಳ್ಳ ಸೇತುವೆ ದುರಸ್ಥಿಗೆ ತಜ್ಞರ ಅಭಿಪ್ರಾಯ ಸಂಗ್ರಹ

0

ಧಾರವಾಡ: ನರಗುಂದ-ಗದಗ ರಾಜ್ಯ ಹೆದ್ದಾರಿಯ ನವಲಗುಂದ ತಾಲ್ಲೂಕಿನ ತಡಹಾಳ ಹತ್ತಿರ ಇರುವ ದೊಡ್ಡಹಳ್ಳ ಹಾಗೂ ಬೆಣ್ಣಿಹಳ್ಳ ಸೇತುವೆ ಕೊಚ್ಚಿ ಹೋದದ್ದನ್ನು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ವೀಕ್ಷಣೆ ಮಾಡಿದರು.

ಅಧಿಕಾರಿಕಾರಿಗಳ ಜೊತೆ ಚರ್ಚಿಸಿದ ಅವರು ಕೂಡಲೇ ವಿಶೇಷ ತಜ್ಞರ ಜೊತೆ ಚರ್ಚಿಸಿ ಸ್ಟೀಲ್ ಬ್ರಿಡ್ಜ್ ಅಥವಾ ನೂತನ ಸೇತುವೆ ನಿರ್ಮಿಸಲು ಈಗಾಗಲೇ ಲೋಕೋಪಯೋಗಿ ಸಚಿವರಾದ ಸತೀಶ ಜಾರಕಿಹೊಳಿ ಅವರ ಜೊತೆ ಚರ್ಚಿಸಿದ್ದು, ತಕ್ಷಣ ವರದಿ ನೀಡಿ ಸರ್ಕಾರದಿಂದ ಮಂಜೂರಾತಿ ಪಡೆಯಬೇಕು. ತಜ್ಞರ ಅಭಿಪ್ರಾಯದ ನಂತರ ಸೇತುವೆ ದುರಸ್ಥಿಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲು ಸೂಚಿಸಿದರು.

ಶನಿವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಚಿವರು ನವಲಗುಂದ ವಿಧಾನಸಭಾ ಕ್ಷೇತ್ರದ ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ, ಪರಿಶೀಲಿಸಿದರು. ನವಲಗುಂದ ಶಾಸಕ ಎನ್.ಹೆಚ್. ಕೋನರಡ್ಡಿ, ಕುಂದಗೋಳ ಶಾಸಕ ಎಂ.ಆರ್.ಪಾಟೀಲ, ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಮುಂತಾದವರು ಸಚಿವರ ಜೊತೆ ಇದ್ದರು.

ಮಳೆ ಹಾನಿ ವೀಕ್ಷಣೆ: ನವಲಗುಂದ, ಅಣ್ಣಿಗೇರಿ ಹಾಗೂ ಹುಬ್ಬಳ್ಳಿ ತಾಲೂಕು ಸೇರಿದಂತೆ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಪ್ರಸಕ್ತ ಮುಂಗಾರು ಮಳೆಯಿಂದ ಅಂದಾಜು 55 ಸಾವಿರ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾಳಾಗಿದ್ದು ರೈತರಿಗೆ ಬೆಳೆಹಾನಿ ಮಂಜೂರಾತಿಗಾಗಿ ತಕ್ಷಣ ಸರ್ಕಾರಕ್ಕೆ ವರದಿ ಸಲ್ಲಿಸಲು ಅಧಿಕಾರಿಕಾರಿಗಳಿಗೆ ಸೂಚಿಸಿದರು.

ನವಲಗುಂದ ನಗರದ ಹುಗ್ಗಿ ಓಣಿಯ ಮನೆ ಬಿದ್ದ ತರುವಾಯ ದ್ಯಾಮವ್ವ ಬನ್ನೆಣ್ಣವರ, ಹಾಗೂ ಕಳ್ಳಿಮಠ ಮೆಹಬೂಬ ನಗರದ ಮೋದಿನಸಾಬ ಶಿರಕೋಳ ಅವರುಗಳಿಗೆ ತಲಾ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ಸಚಿವರು ತಿಳಿಸಿದರು. ಶಲವಡಿ ನಾಯಕನೂರ ಗ್ರಾಮದ ನಡುವೆ ಜಮೀನಿನಲ್ಲಿ ಹೆಸರು ಹಾಗೂ ಈರುಳ್ಳಿ ಬೆಳೆ ಹಾನಿಯಾಗಿದ್ದನ್ನು ವೀಕ್ಷಿಸಿದರು .

ಅಣ್ಣಿಗೇರಿ ತಾಲ್ಲೂಕಿನ ಶಿಶ್ವಿನಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ಮನೆ ಕುಸಿದು ಹಾನಿಯಾದ ಮನೆಗೆ ಭೇಟಿ ನೀಡಿ 25 ಸಾವಿರ ವೈಯಕ್ತಿಕ ಪರಿಹಾರ ಹಾಗೂ ಸರ್ಕಾರದಿಂದ 1 ಲಕ್ಷ 20 ಸಾವಿರ ಪರಿಹಾರ ನೀಡಲು ಕಂದಾಯ ಅಧಿಕಾರಿಗಳಿಗೆ ಹೇಳಿದರು. ಈಗಾಗಲೇ ಮನೆ ಕುಸಿತದಲ್ಲಿ ಸಿಲುಕಿದ 4 ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡಲು ತಿಳಿಸಿದರು.

ಹುಬ್ಬಳ್ಳಿ ತಾಲ್ಲೂಕಿನ ಇಂಗಳಹಳ್ಳಿ ಕ್ರಾಸ್ ಹತ್ತಿರ ಶಿರಗುಪ್ಪಿ ಗ್ರಾಮದ ನಿಂಗವ್ವ ತೊಗರಿಮನಿ ಅವರ ಹೊಲದಲ್ಲಿ ಹೆಸರು ಬೆಳೆ ಹಾನಿಯಾಗಿದ್ದನ್ನು ವೀಕ್ಷಣೆ ಮಾಡಿ ಸರ್ಕಾರಕ್ಕೆ ತಕ್ಷಣ ವರದಿ ಮಾಡಿ ಪರಿಹಾರ ಸಿಗುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದರು.

NO COMMENTS

LEAVE A REPLY

Please enter your comment!
Please enter your name here

Exit mobile version