Home ನಮ್ಮ ಜಿಲ್ಲೆ ಉತ್ತರ ಕನ್ನಡ ಶರಾವತಿ ಪಂಪ್ ಸ್ಟೋರೇಜ್ ಯೋಜನೆ: ಬಿಗ್‌ ಅಪ್‌ಡೇಟ್

ಶರಾವತಿ ಪಂಪ್ ಸ್ಟೋರೇಜ್ ಯೋಜನೆ: ಬಿಗ್‌ ಅಪ್‌ಡೇಟ್

0

ದಾಂಡೇಲಿ: ಶರಾವತಿ ಪಂಪ್ ಸ್ಟೋರೇಜ್ ಯೋಜನೆಯಿಂದ ದುಷ್ಪರಿಣಾಮ ಇಲ್ಲ. ಕೇಂದ್ರ ಸರ್ಕಾರದ ಪರಿಸರ ಮಂತ್ರಾಲಯದ ಅನುಮತಿ. ವನ್ಯಜೀವಿ ಮಂಡಳಿಯಿಂದ ತಾತ್ವಿಕ ಒಪ್ಪಿಗೆ ದೊರೆತಿದೆ. ಈ ಮೂಲಕ ಹಲವು ದಿನಗಳಿಂದ ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದ ಯೋಜನೆಯ ಕುರಿತು ಬಿಗ್ ಅಪ್‌ಡೇಟ್ ಸಿಕ್ಕಿದೆ.

ಕರ್ನಾಟಕ ಸರ್ಕಾರದಿಂದ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಮೂಲಕ ಅನುಷ್ಠಾನಗೊಳಿಸಲು ಉದ್ದೇಶಿಸಿರುವ ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಸಂಬಂಧಿಸಿದಂತೆ ಪರಿಸರವಾದಿಗಳು, ಹೋರಾಟಗಾರರು ಮಾತ್ರವಲ್ಲದೇ, ಸ್ಥಳೀಯರಿಗೂ ಯಾವುದೇ ಆತಂಕ ಬೇಡ ಎಂದು ಕರ್ನಾಟಕ ವಿದ್ಯುತ್ ನಿಗಮದ ಡೆಪ್ಯುಟಿ ಜನರಲ್ ಮ್ಯಾನೇಜರ್ ಪ್ರಕಟಣೆಯ ಮೂಲಕ‌ ತಿಳಿಸಿದ್ದಾರೆ.

ಈ ಯೋಜನೆಯು ಪ್ರಸ್ತುತ ಇರುವ ಶರಾವತಿ ಜಲವಿದ್ಯುತ್ ಯೋಜನಾ ವ್ಯಾಪ್ತಿಯೊಳಗಡೆಯೇ ಇದೆ. ಶರಾವತಿ ಪಂಪ್ ಸ್ಟೋರೇಜ್ ಯೋಜನೆಗಾಗಿ 60 ವರ್ಷ ಹಿಂದೆ ಕಟ್ಟಿಸಿದ ತಳಕಳಲೆ ಮತ್ತು ಉತ್ತರ ಕನ್ನಡ ಜಿಲ್ಲೆಯ ಗೇರುಸೊಪ್ಪ ಜಲಾಶಯಗಳನ್ನೇ ಬಳಕೆ ಮಾಡಲಾಗುತ್ತಿದ್ದು, ಹೊಸ ಜಲಾಶಯ ನಿರ್ಮಾಣ ಮಾಡುತ್ತಿಲ್ಲ. ಹೀಗಾಗಿ ಯಾವುದೇ ಪ್ರದೇಶ ಮುಳುಗಡೆಯಾಗುವುದಿಲ್ಲ.

ಹೊಸ ಜಲಾಶಯಗಳನ್ನು ನಿರ್ಮಾಣ ಮಾಡದೇ ಇರುವುದರಿಂದ ನದಿ ನೀರಿನ ಹರಿವಿನಲ್ಲಿ ಯಾವುದೇ ಮಾರ್ಪಾಟು ಇರುವುದಿಲ್ಲ. ಯೋಜನೆಗೆ 0.37 ಟಿಎಂಸಿ ನೀರು ಅಗತ್ಯವಿದ್ದು, ಈ ನೀರನ್ನು ಮರುಬಳಕೆ ಮಾಡುವುದರಿಂದ ಅಣೆಕಟ್ಟೆಯ ಕೆಳಭಾಗದ ಜನರಿಗೆ ನೀರಿನ ವಿಚಾರದಲ್ಲಿ ಯಾವುದೇ ಅನಾನುಕೂಲ ಆಗುವುದಿಲ್ಲ. ಅಲ್ಲದೆ, ಇಲ್ಲಿನ ನೀರನ್ನು ಬೇರೆಡೆ ಕೊಂಡೊಯ್ಯುವುದೂ ಇಲ್ಲ ಎಂದು ಕೆಪಿಸಿ ಹೇಳಿದೆ‌.

2000 ಮೆಗಾವ್ಯಾಟ್ ವಿದ್ಯುತ್ ಶೇಖರಣಾ ಯೋಜನೆಯನ್ನು ಕೇವಲ 54.155 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಮತ್ತು 24.31 ಹೆಕ್ಟೇರ್ ಖಾಸಗಿ ಭೂಮಿಗೆ ಮಿತಿಗೊಳಿಸಿ ನಿರ್ವಹಿಸಲಾಗುತ್ತಿದೆ. ಬಹುಪಾಲು ರಚನೆಗಳು ಸುರಂಗದ ಒಳಗೆ ಇರುವುದರಿಂದ ಭೂಮಿಯ ಮೇಲ್ಮೈನಲ್ಲಿ ಕನಿಷ್ಠ್ಟ ಪರಿಣಾಮ ಉಂಟಾಗುತ್ತದೆ.

54.155 ಹೆಕ್ಟೇರ್ ಅರಣ್ಯಭೂಮಿ ಪೈಕಿ ಭೂಮಿಯ ಒಳಭಾಗದಲ್ಲಿ 19.982 ಹೆಕ್ಟೇರ್ ಭೂಮಿ ಬರುತ್ತದೆ. ಮೇಲ್ಮೈನಲ್ಲಿ ಕೇವಲ 34.173 ಹೇಕ್ಟೇರ್ ಮಾತ್ರ ಬಳಸಿಕೊಳ್ಳಲಾಗುತ್ತದೆ. ಯೋಜನಾ ವ್ಯಾಪ್ತಿಯಲ್ಲಿ ಬರುವ ಮರಗಳನ್ನು ಗುರುತಿಸಲಾಗಿದ್ದು, ಈ ಪೈಕಿ ಅಗತ್ಯವಿರುವಷ್ಟ್ಟು ಮಾತ್ರ ಮರಗಳನ್ನು ಕಡಿಯಲಾಗುತ್ತದೆ.

ಪಂಪ್ ಸ್ಟೋರೇಜ್ ಯೋಜನೆಗೆ ಈಗಾಗಲೇ ಕೇಂದ್ರ ವಿದ್ಯುತ್ ಪ್ರಾಧಿಕಾರ ಅನುಮತಿ ನೀಡಿದೆ. ಈ ಪ್ರಾಧಿಕಾರವು ಅನುಮತಿ ನೀಡುವ ಮೊದಲು 13 ನಿರ್ದೇಶನಾಲಯಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಿತ್ತು. ಯೋಜನೆಯಿಂದ ಭೂಕುಸಿತ, ಭೂಕಂಪದಂತಹ ಅಪಾಯಗಳು ಉದ್ಭವವಾಗುವುದಿಲ್ಲ, ಜೀವ ವೈವಿದ್ಯತೆಗೆ ಸಮಸ್ಯೆಯಾಗುವುದಿಲ್ಲ, ಭೂಮಿಯ ಸ್ಥಿರತೆ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ ಎಂಬ ಬಗ್ಗೆ ನಿರ್ದೇಶನಾಲಯಗಳು ನೀಡಿದ ಬಳಿಕವೇ ಯೋಜನೆಗೆ ಅನುಮತಿ ನೀಡಲಾಗಿರುತ್ತದೆ.

ಈಗಾಗಲೇ ವನ್ಯ ಜೀವಿಗಳ ಬಗ್ಗೆ ಸಮಗ್ರ ಅಧ್ಯಯನ ನಡೆಸಿದ್ದಲ್ಲದೆ, ರಚನಾತ್ಮಕವಾಗಿ ಭೂಮಿಯ ಸ್ಥಿರತೆಗೆ ಯಾವುದೇ ಧಕ್ಕೆ ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗಿದೆ. ಇದರ ಆಧಾರದ ಮೇಲೆ ವನ್ಯಜೀವಿ ಇಲಾಖಾಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲಿಸಿದ ಬಳಿಕ ಯೋಜನೆಯನ್ನು ವನ್ಯಜೀವಿ ಮಂಡಳಿ ಮುಂದೆ ಮಂಡಿಸಲಾಗಿತ್ತು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದ ಬಳಿಕ ರಾಜ್ಯ ವನ್ಯಜೀವಿ ಮಂಡಳಿ ಮತ್ತು ಕೇಂದ್ರ ವನ್ಯಜೀವಿ ಮಂಡಳಿಗಳು ಯೋಜನೆಗೆ ತಾತ್ವಿಕ ಒಪ್ಪಿಗೆ ನೀಡಿವೆ.

ಇದಲ್ಲದೆ ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ ಮತ್ತು ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ (National Center for Seismology)ದ ನಿಯಮದಂತೆ ಸುರಂಗದಲ್ಲಿ ತಡೆಗೋಡೆಗಳನ್ನು ನಿರ್ಮಿಸುವುದರಿಂದ ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದಿಲ್ಲ.

ಯೋಜನೆ ಅನುಷ್ಠಾನದ ಸಂದರ್ಭದಲ್ಲಿ ಅರಣ್ಯ ಇಲಾಖೆ, ಅರಣ್ಯ ಸಚಿವಾಲಯ, ಪರಿಸರ ಇಲಾಖೆಗಳು ನಿಗದಿಪಡಿಸುವ ಮಾನದಂಡದಡಿ ಕಾರ್ಯಾಚರಣೆ ನಡೆಸಲಾಗುತ್ತದೆ. ಕೇಂದ್ರ ಅರಣ್ಯ ಸಚಿವಾಲಯದ ನಿಯಮಗಳು ಮತ್ತು ಉಲ್ಲೇಖಗಳನ್ವಯ ಅಧ್ಯಯನ ನಡೆಸಲಾಗಿದೆ. ಈ ವರದಿ ಆಧರಿಸಿ ಅರಣ್ಯ ಇಲಾಖೆ ಮತ್ತು ಪರಿಸರ ಇಲಾಖೆಯ ನಿಯಮಗಳಂತೆ ಯೋಜನೆ ಅನುಷ್ಠಾನದ ವೇಳೆ ಉಪಶಮನ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.

ಪಂಪ್ ಸ್ಟೋರೇಜ್ ಯೋಜನೆಗಳಿಂದ ಪರಿಸರ ಸೂಕ್ಷ್ಮ ಪ್ರದೇಶದ ಮೇಲೆ ಹೆಚ್ಚಿನ ದುಷ್ಪರಿಣಾಮ ಉಂಟಾಗುವುದಿಲ್ಲ ಎಂಬುದನ್ನು ಕೇಂದ್ರ ಸರ್ಕಾರದ ಪರಿಸರ ಮತ್ತು ಅರಣ್ಯ ಮಂತ್ರಾಲಯ ಈಗಾಗಲೇ ಸ್ಪಷ್ಟ್ಟಪಡಿಸಿದೆ.

ನವೀಕರಿಸಬಹುದಾದ ಇಂಧನವೇ ಭವಿಷ್ಯದ ಇಂಧನವಾಗುತ್ತಿರುವುದರಿಂದ ಪಂಪ್ ಸ್ಟೋರೇಜ್ ಯೋಜನೆಗಳು ಅತ್ಯವಶ್ಯಕ. ಪರಿಸರದ ಮೇಲೆ ಕನಿಷ್ಠ ಪರಿಣಾಮದೊಂದಿಗೆ ಕೇವಲ 54.155 ಹೆಕ್ಟೇರ್ ವ್ಯಾಪ್ತಿಯ ಅರಣ್ಯ ಪ್ರದೇಶ ಮತ್ತು 24.31 ಹೆಕ್ಟೇರ್ ಖಾಸಗಿ ಭೂಮಿ ಬಳಸಿ 2000 ಮೆಗಾವ್ಯಾಟ್ ವಿದ್ಯುತ್ ಶೇಖರಣೆ ಮಾಡುವ ಯೋಜನೆ ಇದಾಗಿದೆ. ಈ ಯೋಜನೆಯಿಂದ ಯಾವುದೇ ರೀತಿಯಲ್ಲಿ ಜನರು, ವನ್ಯಜೀವಿಗಳು ಮತ್ತು ಅರಣ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ.

ಪಂಪ್ ಸ್ಟೋರೇಜ್ ಯೋಜನೆ ಎಂದರೇನು?: ಪಂಪ್ ಸ್ಟೋರೇಜ್ ಯೋಜನೆಯನ್ನು ಜಗತ್ತಿನ ಅತಿದೊಡ್ಡ ಬ್ಯಾಟರಿ ತಂತ್ರಜ್ಞಾನವೆಂದು ಪರಿಗಣಿಸಲಾಗುತ್ತಿದೆ. ಇದನ್ನು ಎರಡು ಜಲಾಶಯಗಳ ಮಧ್ಯೆ ಕಾರ್ಯಗತಗೊಳಿಸಲಾಗುತ್ತದೆ. ಹೆಚ್ಚುವರಿ ವಿದ್ಯುತ್ ಇದ್ದಾಗ ನೀರನ್ನು ಕೆಳಗಿನ ಜಲಾಶಯದಿಂದ ಮೇಲಿನ ಜಲಾಶಯಕ್ಕೆ ಪಂಪ್ ಮಾಡಿ ಶೇಖರಿಸಲಾಗುತ್ತದೆ. ವಿದ್ಯುತ್ ಬೇಡಿಕೆ ಹೆಚ್ಚಾದಾಗ ಆ ನೀರನ್ನು ಬಳಸಿ ವಿದ್ಯುತ್ ಉತ್ಪಾದಿಸಿ ಪೂರೈಸಲಾಗುತ್ತದೆ.

ಇದಕ್ಕಾಗಿ ಹೊಸ ಜಲಾಶಯಗಳನ್ನು ನಿರ್ಮಿಸುವ ಅಗತ್ಯವಿಲ್ಲ. ಹೆಚ್ಚು ಬೇಡಿಕೆ ಅವಧಿಯಲ್ಲಿ ವಿದ್ಯುತ್ ಉತ್ಪಾದಿಸಲು ಅನುಕೂಲವಾಗುವುದರಿಂದ ಇದು ಗ್ರಿಡ್ ಸ್ಥಿರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ ಡೆಪ್ಯುಟಿ ಜನರಲ್ ಮ್ಯಾನೇಜರ್ ತಿಳಿಸಿದ್ದಾರೆ.

NO COMMENTS

LEAVE A REPLY

Please enter your comment!
Please enter your name here

Exit mobile version