ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆ 4 ಸ್ಥಾಯಿ ಸಮಿತಿಗೆ ಅವಿರೋಧವಾಗಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಯಾರಿಗೂ ಮನಸ್ತಾಪ ಬಾರದ ಹಾಗೆ ಮತ್ತು ಸಮಾನ ನ್ಯಾಯ ಕೊಡುವ ನಿಟ್ಟಿನಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದೆ.
ಶಾಸಕ ಅಭಯ ಪಾಟೀಲ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಮಾರ್ಗದರ್ಶನದಲ್ಲಿ ಈ ಅವಿರೋಧ ಆಯ್ಕೆ ಪ್ರಕ್ರಿಯೆ ನಡೆದಿದೆ. ನೂತನವಾಗಿ ಆಯ್ಕೆಯಾದ ಅಧ್ಯಕ್ಷರನ್ನು ಮೇಯರ್ ಮಂಗೇಶ ಪವಾರ, ಉಪ ಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ ಅಭಿನಂದಿಸಿದ್ದಾರೆ.
ಹೊಸ ಅಧ್ಯಕ್ಷರ ಪಟ್ಟಿ: ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರೇಖಾ ಮೋಹನ ಹೂಗಾರ. ಸಾರ್ವಜನಿಕ ಆರೋಗ್ಯ, ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾಗಿ ಲಕ್ಷ್ಮೀ ಮಹಾದೇವ ರಾಠೋಡ ಆಯ್ಕೆಯಾದರು.
ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಮಾಧವಿ ರಾಘೋಚೆ ಮತ್ತು ಲೆಕ್ಕಗಳ ಸ್ಥಾಯಿ ಸಮಿತಿಗೆ ನಂದು ಮಿರಜಕರ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.