ಬೆಳಗಾವಿ: ಜಿಲ್ಲೆಯ ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ಸಂಭವಿಸಿದ 31 ಕೃಷ್ಣಮೃಗಗಳ ದಾರುಣ ಸಾವಿಗೆ ಹಿಮೋರೆಜಿಕ್ ಸೆಪ್ಟಿಸೆಮಿಯಾ (HS) ಎಂಬ ಬ್ಯಾಕ್ಟೀರಿಯಾ ಸೋಂಕೇ ಕಾರಣವೆಂದು ಅಧಿಕೃತವಾಗಿ ದೃಢಪಟ್ಟಿದೆ ಎಂದು ಮೃಗಾಲಯದ ಎಸಿಎಫ್ ನಾಗರಾಜ್ ಬಾಳೆಹೊಸೂರ್ ತಿಳಿಸಿದರು.
ಅಕ್ಟೋಬರ್ 13ರಿಂದ 16ರೊಳಗೆ ಒಂದಾದಮೇಲೆ ಒಂದು ಕೃಷ್ಣಮೃಗಗಳು ಸಾವನ್ನಪ್ಪುತ್ತಿದ್ದು ಅಧಿಕಾರಿಗಳು ತುರ್ತು ತನಿಖೆ ಕೈಗೊಂಡಿದ್ದರು. ಮರಣೋತ್ತರ ಪರೀಕ್ಷೆಯನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ವೈರಾಣು ತಜ್ಞ ಡಾ. ಚಂದ್ರಶೇಖರ್ ನೇತೃತ್ವದಲ್ಲಿ ನಡೆಸಲಾಗಿದ್ದು, ವರದಿ ಈ ಘಟನೆಗೆ HS ಬ್ಯಾಕ್ಟೀರಿಯಾಗೇ ಕಾರಣ ಎಂದು ಸ್ಪಷ್ಟಪಡಿಸಿದೆ.
ಹೆಚ್ಚುವರಿ ಕಾರಣಗಳು ಕೂಡ ಕಾರಣವಾಗಿರಬಹುದೇ?: ತಜ್ಞರು ನೀಡಿರುವ ವರದಿಯ ಪ್ರಕಾರ, ಹಠಾತ್ ತಾಪಮಾನ ಕುಸಿತ, ಒತ್ತಡ (ಸ್ಟ್ರೆಸ್) ಇವುಗಳು ಸೋಂಕಿನ ಜೊತೆ ಸೇರಿ ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿರಬಹುದು ಎಂದೂ ಸೂಚಿಸಲಾಗಿದೆ.
ಬದುಕುಳಿದ ಕೃಷ್ಣಮೃಗಗಳಿಗೆ ತೀವ್ರ ನಿಗಾ: ಘಟನೆ ನಂತರ, ಮೃಗಾಲಯದಲ್ಲಿರುವ ಕೃಷ್ಣಮೃಗಗಳಿಗೆ ತಕ್ಷಣ ಚಿಕಿತ್ಸೆ ನೀಡಲಾಗಿದ್ದು, ಎಳು ಕೃಷ್ಣಮೃಗಗಳು ಇನ್ನೂ ತೀವ್ರ ನಿಗಾದಲ್ಲಿ ಚಿಕಿತ್ಸೆ ಪಡೆಯುತ್ತಿವೆ. ಉಳಿದ ಮೃಗಗಳಲ್ಲಿ ಚೇತರಿಕೆ ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃಗಾಲಯದಲ್ಲಿರುವ ಇತರ ಪ್ರಾಣಿಗಳಿಗೆ ಮುನ್ನೆಚ್ಚರಿಕೆ ಕ್ರಮ: ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಕತ್ತೆಕಿರುಬ, ಕರಡಿ, ವಿವಿಧ ಜಿಂಕೆ ಪ್ರಬೇಧಗಳಿರುವುದರಿಂದ HS ಸೋಂಕು ಇತರ ಪ್ರಾಣಿಗಳಿಗೆ ತಗುಲದಂತೆ ತುರ್ತು ಪ್ರೋಟೋಕಾಲ್ ಜಾರಿಗೊಳಿಸಲಾಗಿದೆ, ಔಷಧೋಪಚಾರ, ಸ್ಯಾನಿಟೈಜೇಶನ್, ಪ್ರತ್ಯೇಕ ವಾಸಸ್ಥಾನ ಮುಂತಾದ ಕ್ರಮ ಕೈಗೊಳ್ಳಲಾಗಿದೆ.
ಮುನ್ನೆಚ್ಚರಿಕೆ ಕ್ರಮ ಮುಂದುವರಿಕೆ: ಸಾಂಕ್ರಾಮಿಕ ವಿಸ್ತರಣೆ ತಡೆಗಟ್ಟುವ ನಿಟ್ಟಿನಲ್ಲಿ ತಜ್ಞರು ಮೃಗಾಲಯಕ್ಕೆ ವಿಶೇಷ ಮಾರ್ಗಸೂಚಿ ನೀಡಿದ್ದು, ಸೋಂಕು ಪುನುರುತ್ಥಾನವಾಗದಂತೆ ನಿತ್ಯ ಮೇಲ್ವಿಚಾರಣೆ ಮಾಡಲಾಗುತ್ತಿದೆ
