Home ನಮ್ಮ ಜಿಲ್ಲೆ ಬೆಂಗಳೂರು ಬೆಂಗಳೂರು-ಪುಟ್ಟಪರ್ತಿ ಭಕ್ತರಿಗೆ ವಂದೇ ಭಾರತ್ ರೈಲು ಸೌಲಭ್ಯ

ಬೆಂಗಳೂರು-ಪುಟ್ಟಪರ್ತಿ ಭಕ್ತರಿಗೆ ವಂದೇ ಭಾರತ್ ರೈಲು ಸೌಲಭ್ಯ

0

ಬೆಂಗಳೂರು: ಬೆಂಗಳೂರು ನಗರದಿಂದ ಪುಟ್ಟಪರ್ತಿಗೆ ಭೇಟಿ ನೀಡುವ ಭಕ್ತರಿಗೆ ಸಿಹಿಸುದ್ದಿಯೊಂದಿದೆ. ಇನ್ನು ಮುಂದೆ ವಂದೇ ಭಾರತ್ ರೈಲಿನಲ್ಲಿ ಭಕ್ತರು ಸಂಚಾರ ನಡೆಸಬಹುದು. ಈ ಕುರಿತು ತುಮಕೂರು ಸಂಸದ, ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದ್ದಾರೆ.

ಸೋಮವಾರ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿರುವ ವಿ.ಸೋಮಣ್ಣ ಹಿಂದೂಪುರದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ನಿಲುಗಡೆ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ. ಇದು ಈ ಭಾಗದ ಜನರು ಬಹುದಿನದ ಬೇಡಿಕೆಯಾಗಿತ್ತು ಎಂದು ತಿಳಿಸಿದ್ದಾರೆ.

ಬೆಂಗಳೂರು-ಕಾಚಿಗುಡ ನಡುವೆ ಸಂಚಾರ ನಡೆಸುವ ವಂದೇ ಭಾರತ್ ರೈಲು ಇನ್ನು ಮುಂದೆ ಹಿಂದೂಪುರದಲ್ಲಿ ನಿಲುಗಡೆಗೊಳ್ಳಲಿದೆ. ಸತ್ಯ ಸಾಯಿ ಆಶ್ರಮ, ಪುಟ್ಟಪರ್ತಿಗೆ ಹೋಗುವ ಭಕ್ತರು ಬೆಂಗಳೂರು ನಗರದಿಂದ ಇನ್ನು ಮುಂದೆ ವಂದೇ ಭಾರತ್ ರೈಲಿನಲ್ಲಿ ಪುಟ್ಟಪರ್ತಿ ತಲುಪಬಹುದು.

ಹಿಂದೂಪುರದಲ್ಲಿ ವಂದೇ ಭಾರತ್ ರೈಲು ಯಾವಾಗಿನಿಂದ ನಿಲುಗಡೆಗೊಳ್ಳಲಿದೆ? ಎಂದು ದಿನಾಂಕವನ್ನು ಸಚಿವರು ಪ್ರಕಟಿಸಿಲ್ಲ. ಆದರೆ ಹಿಂದೂಪುರದಲ್ಲಿ ರೈಲು ನಿಲ್ಲಿಸಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಬೆಂಗಳೂರು-ಹೈದರಾಬಾದ್ ರೈಲು: ಬೆಂಗಳೂರು ನಗರದ ಯಶವಂತಪುರ ಮತ್ತು ಹೈದರಾಬಾದ್ ಸಮೀಪದ ಕಾಚಿಗುಡ ನಡುವೆ ವಂದೇ ಭಾರತ್ ರೈಲು ಸಂಚಾರ ನಡೆಸುತ್ತದೆ. ಈ ರೈಲು ಸೇವೆಗೆ 24 ಸೆಪ್ಟೆಂಬರ್ 2023ರಂದು ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು.

ರೈಲು ಸಂಖ್ಯೆ 20703/ 20704 ಕಾಚಿಗುಡ -ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹೈದರಾಬಾದ್ ಮತ್ತು ಬೆಂಗಳೂರು ಎರಡು ಐಟಿ ನಗರಗಳನ್ನು ಸಂಪರ್ಕಿಸುತ್ತದೆ. ಈ ರೈಲಿನ ಸಂಪೂರ್ಣ ಸೀಟುಗಳು ಭರ್ತಿಯಾಗುತ್ತಿದ್ದು, 8 ಬೋಗಿಯ ರೈಲನ್ನು ಈಗ 16 ಬೋಗಿ ರೈಲಾಗಿ ಪರಿವರ್ತನೆ ಮಾಡಲಾಗಿದೆ.

ಇದರಿಂದಾಗಿ ಈ ರೈಲಿನ ಸೀಟುಗಳ ಸಂಖ್ಯೆ 530 ರಿಂದ 1128ಕ್ಕೆ ಏರಿಕೆಯಾಗಿದೆ. ಹೊಸ ಬೋಗಿ ಅಳವಡಿಕೆ ಬಳಿಕ 1024 ಪ್ರಯಾಣಿಕ ಸಾಮರ್ಥ್ಯದ 14 ಚೇರ್‌ಕಾರ್‌ಗಳು, 104 ಪ್ರಯಾಣಿಕರ 2 ಎಕ್ಸಿಕ್ಯುಟಿವ್ ಕ್ಲಾಸ್‌ ಸೇರಿ 1128 ಆಸನಗಳಿವೆ.

ಈ ರೈಲಿಗೆ ಕರ್ನಾಟಕಕ್ಕಿಂತ ಆಂಧ್ರ ಪ್ರದೇಶದಲ್ಲಿಯೇ ಹೆಚ್ಚು ನಿಲುಗಡೆ ಇದೆ ಎಂಬ ಆರೋಪವಿದೆ. ಸದ್ಯ ರೈಲಿಗೆ ಆಂಧ್ರ ಪ್ರದೇಶದ ಮೆಹಬೂಬ್ ನಗರ, ಕರ್ನೂಲ್‌ ಸಿಟಿ, ಅನಂತಪುರ, ಧರ್ಮಾವರಂ ನಿಲ್ದಾಣದಲ್ಲಿ ನಿಲುಗಡೆ ಇದೆ. ಈಗ ಹಿಂದೂಪುರ ನಿಲುಗಡೆಯನ್ನು ಹೊಸದಾಗಿ ಸೇರಿಸಲಾಗಿದೆ.

ಬೆಂಗಳೂರು-ಹೈದರಾಬಾದ್ ನಡುವೆ ಸಂಚಾರ ನಡೆಸುವ ಟೆಕ್ಕಿಗಳಿಗೆ ಈ ರೈಲು ಅನುಕೂಲಕರವಾಗಿದೆ. ಆದ್ದರಿಂದ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಬೋಗಿಗಳ ಸಂಖ್ಯೆಯನ್ನು ಹೆಚ್ಚಳ ಮಾಡಲಾಗಿದೆ. ಈಗ ರೈಲಿಗೆ ಹೊಸ ನಿಲುಗಡೆ ಘೋಷಣೆ ಮಾಡಲಾಗಿದೆ.

ಈ ರೈಲು ಕಾಚಿಗುಡದಿಂದ ಬೆಳಗ್ಗೆ 5.30ಕ್ಕೆ ಹೊರಡಲಿದೆ. ಮಧ್ಯಾಹ್ನ 2ಕ್ಕೆ ಯಶವಂತಪುರಕ್ಕೆ ಆಗಮಿಸಲಿದೆ. ಈಗ ಹೊಸ ನಿಲ್ದಾಣ ನೀಡಿರುವ ಕಾರಣ ರೈಲಿನ ವೇಳಾಪಟ್ಟಿಯೂ ಬದಲಾವಣೆಯಾಗಲಿದೆ. ಹೊಸ ವೇಳಾಪಟ್ಟಿಯನ್ನು ಘೋಷಣೆ ಮಾಡಬೇಕಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version