ಬಾಗಲಕೋಟೆ: ಅಮೆರಿಕದಲ್ಲಿ ನೆಲೆಸಿರುವ ಟೆಕ್ಕಿಯೊಬ್ಬರು ಸಿಸಿ ಕ್ಯಾಮೆರಾ ನೆರವಿನಿಂದ ಪೋಷಕರನ್ನು ಎಚ್ಚರಿಸಿ ಮುಧೋಳದಲ್ಲಿನ ತಮ್ಮ ಮನೆಯ ದರೋಡೆ ಯತ್ನವನ್ನು ವಿಫಲಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.
ಮುಧೋಳದ ಸಿದ್ದರಾಮೇಶ್ವರ ನಗರದ ನಿವಾಸಿ ಹನುಮಂತಗೌಡ ಸಂಕಪ್ಪನವರ ಮನೆಗೆ ಮಂಗಳವಾರ ರಾತ್ರಿ ಕುಖ್ಯಾತ ಚಡ್ಡಿ ಗ್ಯಾಂಗ್‌ನ ಕಳ್ಳರು ಲಗ್ಗೆಯಿಟ್ಟಿದ್ದು, ಅಮೆರಿಕದಲ್ಲಿ ನೆಲೆಸಿರುವ ಹನುಮಂತಗೌಡರ ಪುತ್ರಿ ಶ್ರುತಿ ತಮ್ಮ ಮೊಬೈಲ್‌ನಲ್ಲಿರುವ ಸಿಸಿ ಕ್ಯಾಮೆರಾ ವೀಕ್ಷಿಸುವಾಗ ಮನೆಯಂಗಳದಲ್ಲಿ ಇಬ್ಬರು ಓಡಾಡುವುದು ಕಾಣಿಸಿಕೊಂಡಿದೆ.
ಆಗ ಕೂಡಲೇ ತಮ್ಮ ತಂದೆಗೆ ಶ್ರುತಿ ಕರೆ ಮಾಡಿದ್ದು, ಅಲರ್ಟ್ ಆದ ಅವರು ಮನೆಯ ಎಲ್ಲ ಲೈಟ್‌ಗಳನ್ನು ಹಚ್ಚಿದ್ದಾರೆ. ಇದರಿಂದ ಭಯಗೊಂಡ ಕಳ್ಳರು ಅಲ್ಲಿಂದ ಕಾಲ್ಕಿತ್ತಿದ್ದಾರೆ. ಸಿಸಿಟಿವಿ ಅಳವಡಿಕೆಯ ಮಹತ್ವವನ್ನು ಈ ಘಟನೆ ತೋರಿಸಿಕೊಟ್ಟಿದೆ. ಮಂಗಳವಾರ ರಾತ್ರಿ 1 ರಿಂದ 2 ಗಂಟೆ ನಡುವಿನ ಅವಧಿಯಲ್ಲಿ ಈ ಘಟನೆ ಜರುಗಿದೆ.