Home ನಮ್ಮ ಜಿಲ್ಲೆ ಬಾಗಲಕೋಟೆ ಬಾಗಲಕೋಟೆ: ಡಿಸಿ, ಎಸ್ಪಿ ಕಚೇರಿಯಲ್ಲಿ ರಾಜ್ಯದ ಮೊದಲ ಕಾನೂನು ಸಲಹಾ ಕೇಂದ್ರ

ಬಾಗಲಕೋಟೆ: ಡಿಸಿ, ಎಸ್ಪಿ ಕಚೇರಿಯಲ್ಲಿ ರಾಜ್ಯದ ಮೊದಲ ಕಾನೂನು ಸಲಹಾ ಕೇಂದ್ರ

0

ಬಾಗಲಕೋಟೆ: ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾದ ಕಾನೂನು ಸೇವಾ ಕೇಂದ್ರಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎನ್.ವಿ. ವಿಜಯ್ ಶುಕ್ರವಾರ ಚಾಲನೆ ನೀಡಿದರು.

ಕಾನೂನು ಸೇವಾ ಕೇಂದ್ರಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, “ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉಚಿತವಾಗಿ ಕಾನೂನು ಸಲಹೆ ಮತ್ತು ಸೇವೆಗಳನ್ನು ಕಾನೂನು ಸಲಹೆಗಾರರಿಂದ ಒದಗಿಸುವ ಸಲುವಾಗಿ ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ” ಎಂದು ತಿಳಿಸಿದರು.

“ಮುಖ್ಯವಾಗಿ ಜಿಲ್ಲಾಡಳಿತ ಭವನಕ್ಕೆ ಕಚೇರಿ ಕೆಲಸದ ನಿಮಿತ್ತ ರೈತರು, ಮಹಿಳೆಯರು, ವಯೋವೃದ್ಧರು, ಆರ್ಥಿಕ ದುರ್ಲಬರು ಹಾಗೂ ಸಾರ್ವಜನಿಕರು ದಿನಂಪ್ರತಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುತ್ತಾರೆ. ಅಂತಹ ಜನರು ಅಲೆದಾಡುವುದನ್ನು ತಪ್ಪಿಸುವ ಸಲುವಾಗಿ ಈ ಕಾರ್ಯಕ್ಕೆ ಮುಂದಾಗಿರುವುದಾಗಿ ತಿಳಿಸಿದ ಅವರು, ಆಯಾ ತಾಲೂಕಿನ ತಹಶೀಲ್ದಾರ್ ಹಾಗೂ ಜಿಲ್ಲಾ ಕಾರಾಗೃಹದಲ್ಲಿಯೂ ಸಹ ಕಾನೂನು ಸಲಹಾ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕೆಂದು” ತಿಳಿಸಿದರು.

“ಕಾನೂನು ಸೇವಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 15100 ಗೆ ಸಹ ಕರೆ ಮಾಡಿ ಕಾನೂನು ಸಲಹೆ ಪಡೆಯಬಹುದಾಗಿರುತ್ತದೆ. ಈ ಕಾನೂನು ಕೇಂದ್ರಗಳಲ್ಲಿ ಕೃಷಿ, ಮಹಿಳೆಯರ ಹಕ್ಕು, ಕುಟುಂಬ ಕಲಹ ವಾಜ್ಯ, ಹಿರಿಯ ನಾಗರಿಕರ ಹಕ್ಕು, ಕಾರ್ಮಿಕರ ಕಾಯ್ದೆ, ಅಪರಾಧ, ದೌರ್ಜನ್ಯ, ಭೂ-ವ್ಯಾಜ್ಯ ಪ್ರಕರಣಗಳು, ಭೂ ಸುಧಾರಣೆ ಪ್ರಕರಣಗಳು, ಭೂ ಮಂಜೂರಾತಿ ಪ್ರಕರಣಗಳು, ಭೂ ಪರಭಾರೆ ನಿಷೇಧ ಪ್ರಕರಣಗಳು, ಭೂ ಸ್ವಾಧೀನ ಪ್ರಕರಣಗಳು, ಭೂ ಮೇಲ್ಮನವಿ ಪ್ರಕರಣಗಳು, ಭೂ ಒತ್ತುವರಿ ಪ್ರಕರಣಗಳು, ಹಕ್ಕು ಪತ್ರ ಪ್ರಕರಣಗಳು, ಪಿಂಚಣಿ ಸೌಲಭ್ಯ ಸೇರಿದಂತೆ ಇತರೆ ಸಮಸ್ಯೆಗಳ ಕುರಿತಂತೆ ಕಾನೂನು ಸಲಹೆ ಹಾಗೂ ಸೇವೆಗಳನ್ನು ಉಚಿತವಾಗಿ ನೀಡಲಾಗುತ್ತದೆ” ಎಂದರು.

“ಯಾರೂ ನ್ಯಾಯ ಪಡೆಯುವುದರಿಂದ ವಂಚಿತರಾಗಬಾರದು ಎಂಬ ದೃಷ್ಟಿಯಿಂದ ಜಿಲ್ಲಾ ಮತ್ತು ತಾಲೂಕು ಹಂತದಲ್ಲಿ ಕಾನೂನು ಸೇವೆ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದೆ. ಜನರಲ್ಲಿ ಕಾನೂನಿನ ಅರಿವು ಮತ್ತು ನೆರವು ನೀಡುವುದು ಪ್ರಾಧಿಕಾರದ ಉದ್ದೇಶವಾಗಿದೆ. ಈ ಕಾನೂನು ಸಲಹಾ ಕೇಂದ್ರದ ಸದುಪಯೋಗವನ್ನು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಡೆದುಕೊಳ್ಳಿ” ಎಂದು ಅವರು ತಿಳಿಸಿದರು.

NO COMMENTS

LEAVE A REPLY

Please enter your comment!
Please enter your name here

Exit mobile version